ಮೈಸೂರು: ದಸರಾ ಹಬ್ಬ ಮುಗಿದಿದೆ… ಚಿನ್ನದ ಅಂಬಾರಿ ಹೊತ್ತ ಜಂಬೂಸವಾರಿಯೂ ಸಂಪನ್ನವಾಗಿದೆ. ಆದರೆ, ನಗರದಲ್ಲಿ ಈಗಲೂ ‘ಅಂಬಾರಿ’ಯೊಂದರಲ್ಲಿ ಸಂಚರಿಸಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.
ಅದೆಂತಹ ಅಂಬಾರಿ ಅಂತೀರಾ? ಅದು ಅಂಬಾರಿ ನಾಮಧೇಯದ ಡಬ್ಬಲ್ ಡೆಕ್ಕರ್ ಬಸ್. ನಗರದಲ್ಲಿ ಅಂತಹ ೬ ಬಸ್‌ಗಳಿದ್ದು, ಅವುಗಳ ಮೇಲ್ಭಾಗ (ಅಪ್ಪರ್ ಡೆಕ್)ದ ಆಸನಗಳಲ್ಲಿ ಕುಳಿತು ಸಂಚರಿಸಲು ನಾಲ್ಕೈದು ದಿನಗಳವರೆಗೂ ಟಿಕೆಟ್ ಸಿಗುವುದಿಲ್ಲ; ಸಂಪೂರ್ಣವಾಗಿ ಬಿಕರಿಯಾಗಿಬಿಟ್ಟಿವೆ. ವಿದ್ಯುತ್ ದೀಪಾಲಂಕಾರದಿಂದ ತಾರಾಮಂಡಲದಂತೆ ಕಂಗೊಳಿಸುತ್ತಿರುವ ಸಾಂಸ್ಕೃತಿಕ ನಗರಿಗೆ ಬೇರೆ ಬೇರೆ ಜಿಲ್ಲೆಗಳು, ದೇಶ ಮತ್ತು ವಿದೇಶಗಳಿಂದ ಬಂದಿರುವ ಪ್ರವಾಸಿಗರು ಆಕರ್ಷಿತರಾಗಿದ್ದಾರೆ.
ದಸರಾ ಹಬ್ಬದ ಸಮಯದಲ್ಲೇ ದೀಪಾಲಂಕಾರ ವೀಕ್ಷಣೆಗಾಗಿ ಪ್ರವಾಸೋದ್ಯಮ ಇಲಾಖೆಯು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ೬ ಅಂಬಾರಿ ಬಸ್‌ಗಳನ್ನು ನಗರ ಸಂಚಾರಕ್ಕಾಗಿ ನಿಯೋಜನೆ ಮಾಡಿದೆ. ಅ. ೩ರಂದು ಈ ಅಂಬಾರಿ ಬಸ್‌ಗಳಲ್ಲಿ ಆಸನಗಳನ್ನು ಮುಂಗಡವಾಗಿ ಕಾಯ್ದಿರಿಸಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿತ್ತು. ಅಷ್ಟೂ ದಿನಗಳವರೆಗೂ ಈ ಬಸ್‌ನ ಮೇಲ್ಭಾಗದಲ್ಲಿರುವ ಎಲ್ಲ ೨೪ ಆಸನಗಳೂ ಅಂದೇ ಮುಂಗಡವಾಗಿ ಕಾಯ್ದಿರಿಸಲ್ಪಟ್ಟಿವೆ. ಆದರೆ, ಕೆಳಭಾಗದಲ್ಲಿರುವ ೨೦ ಆಸನಗಳ ಪೈಕಿ ಅರ್ಧದಷ್ಟು ಮಾತ್ರಕಾಯ್ದಿರಿಸಲ್ಪಟ್ಟಿವೆ. ಅಪ್ಪರ್ ಡೆಕ್‌ನಲ್ಲಿ ಪ್ರಯಾಣಿಸಲು ೫ ವರ್ಷ ಮೇಲ್ಪಟ್ಟ ಎಲ್ಲರಿಗೂ ತಲಾ ೫೦೦ ರೂ. ಕೆಳಭಾಗದಲ್ಲಿರುವ ಆಸನಗಳಿಗೆ ೨೫೦ ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ.
ವಿವಿಧೆಡೆಯಿಂದ ಬಂದಂತಹ ಪ್ರವಾಸಿಗರಿಗೆ ನಗರಾದ್ಯಂತ ದೀಪಾಲಂಕಾರ ವೀಕ್ಷಣೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ೬ ಅಂಬಾರಿ ಬಸ್ ಗಳನ್ನು ನಿಯೋಜನೆ ಮಾಡಲಾಗಿದ್ದು, ಪ್ರತಿದಿನವೂ ತಲಾ ೩ರಂತೆ ೧೮ ಟ್ರಿಪ್‌ಗಳಲ್ಲಿ ಸಂಚರಿಸುತ್ತಿವೆ. ೧೫ ದಿನಗಳಿಂದ ದಸರಾ ಪ್ರಯಾಣದ ಆನ್‌ಲೈನ್ ಬುಕಿಂಗ್ ಆಗಿದೆ. ಓಪನ್ ಟಾಪ್ ವ್ಯವಸ್ಥೆ ಹೊಂದಿರುವ ಆಸನದಲ್ಲಿ ಕುಳಿತು ಪ್ರವಾಸಿಗರು ಸಾಂಸ್ಕೃತಿಕ ನಗರಿಯ ಸೌಂದರ್ಯವನ್ನು ಸವಿಯುತ್ತಿದ್ದಾರೆ.
ಉಳಿದ ದಿನವೂ ಅಂಬಾರಿಗೆ ಬೇಡಿಕೆ: ಅಂಬಾರಿ ಡಬಲ್ ಡೆಕ್ಕರ್ ಬಸ್‌ಗಳು ಐಷಾರಾಮಿಯಾಗಿದ್ದು, ರಸ್ತೆಯಲ್ಲಿ ಚಲಿಸಲು ಕನಿಷ್ಠ ೨೨ ಅಡಿ ಎತ್ತರದವರೆಗೂ ಕ್ಲಿಯರೆನ್ಸ್ ಇರಬೇಕು. ಈಗಾಗಲೇ ೬ ಬಸ್‌ಗಳಿವೆ. ಇವುಗಳನ್ನು ಆರ್‌ಟಿಒ ಡಿಪೋದಲ್ಲಿ ನಿಲುಗಡೆ ಮಾಡಲಾಗುತ್ತಿದೆ.
ಸಾಮಾನ್ಯ ದಿನಗಳಲ್ಲಿ ಒಂದು ಬಸ್ ಸಂಚಾರ: ದಸರಾ ಹೊರತಾಗಿ ಸಾಮಾನ್ಯ ಮತ್ತು ರಜೆ ದಿನಗಳಲ್ಲಿ ಒಂದು ಅಂಬಾರಿ ಬಸ್ ಮಾತ್ರ ಪ್ರತಿದಿನ ಬೆಳಿಗ್ಗೆ ೧೦ರಿಂದ ರಾತ್ರಿ ೧೦ ಗಂಟೆಯವರೆಗೆ ಸಂಚರಿಸುತ್ತದೆ. ವಿಶಾಲವಾದ ಜಾಗ, ಮರಗಳ ಅಡೆತಡೆ ಇಲ್ಲದಿರುವುದು ಸಂಬಂಧಪಟ್ಟ ನಿಗಮ/ಪ್ರಾಽಕಾರ, ಇಲಾಖೆಗಳ ಅನುಮತಿ ದೊರೆತರೆ ಈ ಬಸ್ ಸಂಚಾರದ ಮಾರ್ಗಗಳನ್ನು ವಿಸ್ತರಿಸಬಹುದು.
ಟಿಕೆಟ್ ಸಿಗದೆ ಪ್ರವಾಸಿಗರಿಗೆ ನಿರಾಸೆ: ಮೈಸೂರಿನ ೧೨೧ ರಸ್ತೆಗಳು, ೯೬ ವೃತ್ತಗಳು, ೧೦೬ ಕಿ. ಮೀ. ವ್ಯಾಪ್ತಿಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ದೀಪಾಲಂಕಾರದ ವ್ಯವಸ್ಥೆ ಮಾಡಿದೆ. ದಸರಾ ಹಿನ್ನೆಲೆಯಲ್ಲಿ ಟಿಕೆಟ್ ಬುಕಿಂಗ್ ಮಾಡಿಕೊಂಡಿರುವ ಸಾರ್ವಜನಿಕರು ಇದೀಗ ದೀಪಾಲಂಕಾರ ಸೊಬಗಿಗೆ ಮನ ಸೋತಿದ್ದು, ಪ್ರಸ್ತುತ ನಗರದಲ್ಲಿ ಆರು ಡಬ್ಬಲ್ ಡೆಕ್ಕರ್ ಬಸ್ ಸಂಚರಿಸುತ್ತಿದ್ದು, ದೀಪಾಲಂಕಾರದ ಸೊಬಗು ಸವಿಯುತ್ತಿದ್ದಾರೆ. ಮತ್ತೊಂದೆಡೆ ಟಿಕೆಟ್ ಸಿಗದೇ ಹಲವಾರು ಪ್ರವಾಸಿಗರು ನಿರಾಸೆಗೊಂಡಿದ್ದಾರೆ. ಅಂಬಾರಿ ಬಸ್‌ಗಳ ಸಂಚಾರವನ್ನು ಅ. ೨೧ರ ನಂತರವೂ ಕೆಲವು ದಿನ ವಿಸ್ತರಿಸಿದರೆ, ವಿದ್ಯುತ್ ದೀಪಗಳಿಂದ ಜಗಜಗಿಸುವ ಮೈಸೂರನ್ನು ಇನ್ನಷ್ಟು ಕಣ್ತುಂಬಿಕೊಳ್ಳಬಹುದು ಎಂಬುದು ಹಲವು ಪ್ರವಾಸಿಗರ ಇಂಗಿತ.
ಅಂಬಾರಿ ಬಸ್ ಸಂಚಾರ ಮಾರ್ಗ: ಹೋಟೆಲ್ ಮಯೂರ ಹೊಯ್ಸಳದಿಂದ (ದಾಸಪ್ಪ ವೃತ್ತ ಸಮೀಪ) ಆರಂಭ ಆಗುವ ಬಸ್ ಸಂಚಾರ, ಜಿಲ್ಲಾಽಕಾರಿ ಕಚೇರಿ, ಕುಕ್ಕರಹಳ್ಳಿ ಕೆರೆ, ಮೈಸೂರು ವಿಶ್ವ ವಿದ್ಯಾಲಯ, ರಾಮಸ್ವಾಮಿ ವೃತ್ತ, ಸಂಸ್ಕೃತ ಪಾಠಶಾಲೆ, ಕೆ. ಆರ್. ಸರ್ಕಲ್, ದೊಡ್ಡ ಗಡಿಯಾರ, ಅರಮನೆ ದಕ್ಷಿಣ ದ್ವಾರ, ಹಾರ್ಡಿಂಜ್ ಸರ್ಕಲ್, ಮೃಗಾಲಯ, ಕಾರಂಜಿ ಕೆರೆ, ಸರ್ಕಾರಿ ಅತಿಥಿಗೃಹ ಗೆಸ್ಟ್ ಹೌಸ್, ಸಂತ ಫಿಲೋಮಿನಾ ಚರ್ಚ್, ಬನ್ನಿಮಂಟಪ, ಆಯುರ್ವೇದ ಆಸ್ಪತ್ರೆ ಸರ್ಕಲ್, ರೈಲ್ವೆ ನಿಲ್ದಾಣದಿಂದ ಮತ್ತೆ ಹೋಟೆಲ್ ಮಯೂರ ಹೊಯ್ಸಳಕ್ಕೆ ತಲುಪುತ್ತದೆ.
ಪ್ರತಿದಿನ ಸಂಜೆ ವೇಳೆ ೩ ಟ್ರಿಪ್: ಇದೀಗ ಕೆಎಸ್‌ಟಿಡಿಸಿ ವತಿಯಿಂದ ಆರು ಬಸ್‌ಗಳು ಸಂಚರಿಸುತ್ತಿದ್ದು ಪ್ರತಿದಿನ ಸಂಜೆ ೬. ೩೦, ೭. ೩೦ ಮತ್ತು ರಾತ್ರಿ ೯.೩೦ಕ್ಕೆ ಮೂರು ಟ್ರಿಪ್ ಹೋಗುತ್ತವೆ. ಪ್ರತಿ ಶನಿವಾರ ಮತ್ತು ಭಾನುವಾರ ಅಂಬಾರಿ ಬಸ್‌ಗಳ ಸಂಚಾರ ಸೌಲಭ್ಯ ಕಲ್ಪಿಸಿದರೆ ಪ್ರವಾಸಿಗರಿಗೆ ನಗರ ಪ್ರದಕ್ಷಿಣೆಗೆ ಅನುಕೂಲ ಆಗುತ್ತದೆ.
ಡಬ್ಬಲ್ ಡೆಕ್ಕರ್‌ಗೆ ಬಹಳ ಬೇಡಿಕೆ: ಪ್ರವಾಸಿಗರಿಂದ ಹೆಚ್ಚು ಬೇಡಿಕೆ ಇದ್ದು, ಅಪ್ಪರ್ ಡೆಕ್ ನಲ್ಲಿ ನಿಂತು ಪ್ರಯಾಣಿಸಲು ೬ ಮಂದಿಗೆ ಮಾತ್ರ ಮ್ಯಾನುವಲ್ ಟಿಕೆಟ್‌ಗಳನ್ನು ನೀಡಿ ಅವಕಾಶ ಕಲ್ಪಿಸಲಾಗುತ್ತಿತ್ತು. ಅದರಿಂದ ಸೀಟಿನಲ್ಲಿ ಕುಳಿತಿದ್ದವರಿಗೆ ತೊಂದರೆ ಆಗುತ್ತಿತ್ತು ಎಂಬುದು ಮನದಟ್ಟಾಯಿತು. ಹಾಗಾಗಿ ಅದನ್ನು ರದ್ದು ಮಾಡಲಾಗಿದೆ. ಟಿಕೆಟ್ ಬುಕಿಂಗ್ ಮಾಡಿರುವವರಿಗೆ ಮಾತ್ರ ಅವಕಾಶ ನೀಡಲಾಗಿದ್ದು , ದಸರಾ ನಂತರ ಪ್ರತಿದಿನ ಬೆಳಿಗ್ಗೆ ೧೦. ೩೦ರಿಂದ ರಾತ್ರಿ ೮ ರವರೆಗೆ ಅಂಬಾರಿ ಬಸ್ ಇರಲಿದೆ. – ಕೆ. ಆರ್. ಮಧುರಾಜ್, ವ್ಯವಸ್ಥಾಪಕರು, ಕೆಎಸ್‌ಟಿಡಿಸಿ, ಮೈಸೂರು ಸಾರಿಗೆ ವಿಭಾಗ