ಕೊಡಗು: ಮೈಸೂರು ರಾಜಮನೆತನದ ಕಾಲದಲ್ಲಿ ರಚನೆಯಾಗಿದ್ದ ಸಂಸ್ಥೆ ಬಡವರಿಗೆ ನಿವೇಶನ ಕೊಡುತ್ತಿತ್ತು. ಆದರೆ ಇಂದು ಅದೇ ಮೂಡಾ ಶ್ರೀಮಂತರಿಗೆ ನಿವೇಶನ ಕೊಡುವ ಸಂಸ್ಥೆಯಾಗಿ ಪರಿವರ್ತನೆಯಾಗಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕೊಡಗಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಯದುವೀರ್ ಒಡೆಯರ್ ಅವರು, ಎರಡರಲ್ಲೂ ಹಗರಣ ಆಗಿದೆ ಅಂತಾ ನಾವು ಎಲ್ಲಾ ಕಡೆ ಹೇಳಿದ್ದೇವೆ. ಇದೇ ವಿಚಾರವಾಗಿ ನಾಳೆ ಮೈಸೂರಿನಲ್ಲಿ ನಮ್ಮ ಪಕ್ಷದಿಂದಲೂ ಪ್ರತಿಭಟನೆ ಇದೆ. ಸರ್ಕಾರ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ. ಜೊತೆಗೆ ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಇದನ್ನು ಸಿಬಿಐಗೆ ಕೊಡಬೇಕು. ಎರಡೂ ಪ್ರಕರಣಗಳ ಸತ್ಯಾಂಶ ಹೊರಬರಬೇಕು ಅಂದರೆ ಕೇಸ್‌ನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.