ಬೆಂಗಳೂರು : ರಾಜ್ಯ ಭೇಟಿ ವೇಳೆಯೇ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಎನ್.ಡಿ.ಆರ್.ಎಫ್ ಅಡಿ ಬರ ಪರಿಹಾರ ಘೋಷಣೆ ಮಾಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದೇ ಗೃಹ ಸಚಿವರು ಘೋಷಣೆ ಮಾಡಿದರೆ ರೈತರ ಪರ ಕಾಳಜಿ ಇದೆ ಅಂತ ಒಪ್ಪುತ್ತೇವೆ. ಇಲ್ಲದಿದ್ದರೆ ರೈತರ ಪರ ಯಾವುದೇ ಕಾಳಜಿ ಇಲ್ಲ, ಕೇವಲ ನಾಟಕ ಮಾಡುತ್ತಿದ್ದಾರೆ ಅಂತ ಅನಿಸುತ್ತದೆ ಎಂದರು.
ಬರ ಪೀಡಿತ ತಾಲೂಕುಗಳನ್ನು ಸೆಪ್ಟೆಂಬರ್ 13 ರಂದು ಘೋಷಣೆ ಮಾಡಿದ್ದು, 18,172 ಕೋಟಿ ಬರ ಪರಿಹಾರಕ್ಕಾಗಿ ಸೆಪ್ಟೆಂಬರ್ 23 ರಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಕೇಂದ್ರ ಕೃಷಿ ಕಾರ್ಯದರ್ಶಿಯನ್ನೂ ಭೇಟಿ ಮಾಡಿದ್ದೇವೆ. ಡಿಸೆಂಬರ್ನಲ್ಲಿ ಪ್ರಧಾನಿ ಮೋದಿ ಭೇಟಿಯಾಗಿ ಮನವಿ ಮಾಡಿದ್ದೇವೆ. ಜನವರಿಯಲ್ಲೂ ಸಿದ್ದರಾಮಯ್ಯ ಭೇಟಿಯಾಗಿ ಮನವಿ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರ ಸಭೆ ಮಾಡಿ ಯಾವ ತೀರ್ಮಾನವೂ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.