ಹಾಸನ : ತಮ್ಮ ಗ್ರಾಮಕ್ಕೆ ಪ್ರತ್ಯೇಕ ಮತಗಟ್ಟೆ ತೆರೆಯುವಂತೆ ಒತ್ತಾಯಿಸಿ ಹಾಸನ ಜಿಲ್ಲೆ ಬೇಲೂರು ತಹಶೀಲ್ದಾರ್ ಕಚೇರಿ ಬಳಿ ಬೋವಿ ಕಾಲೋನಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಮೇ 10ರಂದು ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು ತಮ್ಮ ಗ್ರಾಮದಲ್ಲೇ ಮತಗಟ್ಟೆ ತೆರೆಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೆ ಮತಗಟ್ಟೆ ತೆರೆಯದಿದ್ದರೆ ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.
ಬೇಲೂರು ತಹಶೀಲ್ದಾರ್ ಕಚೇರಿ ಬಳಿ ಗುಂಪು ಸೇರಿದ ಬೇಲೂರು ತಾಲೂಕಿನ ಹಳೇಬೀಡು ಹೋಬಳಿ ಬೋವಿ ಕಾಲೋನಿ ಗ್ರಾಮಸ್ಥರು, ನಮ್ಮ ಕಾಲೋನಿ ಗ್ರಾಮದಲ್ಲಿ 550 ಮತದಾರರಿದ್ದಾರೆ. ಮತದಾನ ಮಾಡಲು ಎರಡು ಕಿಲೋ ಮೀಟರ್ ಹೋಗಿ ನರಸೀಪುರ ಗ್ರಾಮದಲ್ಲಿ ಮತ ಚಲಾಯಿಸಬೇಕು. ಗ್ರಾಮದಲ್ಲಿ ವಯೋವೃದ್ಧರು, ಅನಾರೋಗ್ಯ ಪೀಡಿತರಿದ್ದಾರೆ. 2 ಕಿಲೋ ಮೀಟರ್ ಹೋಗಿ ಮತದಾನ ಮಾಡಲು ಕಷ್ಟ ಆಗುತ್ತೆ. ಹೀಗಾಗಿ ಬೋವಿ ಕಾಲೋನಿಯಲ್ಲೇ ಮತಗಟ್ಟೆ ತೆರೆಯಿರಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಜೊತೆಗೆ ಮತಗಟ್ಟೆ ತೆರೆಯದಿದ್ದರೆ ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.
ಮತದಾನಕ್ಕೆ ಜಿಲ್ಲಾಡಳಿತದಿಂದ ಸಿದ್ಧತೆ : ಹಾಸನ ಜಿಲ್ಲೆಯಲ್ಲಿ ಮತದಾನಕ್ಕೆ ಜಿಲ್ಲಾಡಳಿತ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಹಾಸನ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ 2,000 ಮತಗಟ್ಟೆ ನಿರ್ಮಾಣ ಮಾಡಲಾಗಿದ್ದು ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಮತಗಟ್ಟೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 6 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಆಯಾ ಕ್ಷೇತ್ರದ ತಾಲ್ಲೂಕು ಕೇಂದ್ರದಿಂದ ಮತಯಂತ್ರ ಪರಿಶೀಲನೆ ಬಳಿಕ ಮತಗಟ್ಟೆಯತ್ತ ಸಿಬ್ಬಂದಿ ತೆರಳುತ್ತಿದ್ದಾರೆ. ಮೇ 10ರ ಬೆಳಗ್ಗೆ ಆರಂಭವಾಗುವ ಮತದಾನಕ್ಕೆ ಸಕಲ ಸಿದ್ದತೆ ಜೊತೆ ಮತಗಟ್ಟೆಗೆ ಸಿಬ್ಬಂದಿ ತೆರಳುತ್ತಿದ್ದಾರೆ. ಹಾಸನ ಜಿಲ್ಲೆಯ ಏಳು ಕ್ಷೇತ್ರದಲ್ಲಿ ಮತದಾನಕ್ಕಾಗಿ 2000 ಮತಗಟ್ಟೆ ನಿರ್ಮಾಣ ಮಾಡಲಾಗಿದ್ದು ಮುಕ್ತ ಮತದಾನಕ್ಕಾಗಿ 10 ಸಾವಿರಕ್ಕೂ ಅಧಿಕ ಮತಗಟ್ಟೆ ಸಿಬ್ಬಂದಿ, ಆರು ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. 14 ಲಕ್ಷದ 99 ಸಾವಿರ ಮತದಾರರು ಜಿಲ್ಲೆಯ ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಹಾಸನದ ಕಲಾ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆಯುತ್ತಿದೆ.