Mysore
23
overcast clouds
Light
Dark

ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಸಫಾರಿ ಆರಂಭ

ಹನೂರು : ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಲೆ ಮಹದೇಶ್ವರ ವನ್ಯ ಧಾಮ, ಕಾವೇರಿ ವನ್ಯಧಾಮ ಹಾಗೂ ಬಿ ಆರ್ ಟಿ ಸಂರಕ್ಷಿತ ಅರಣ್ಯ ಪ್ರದೇಶಗಳಿದ್ದು ಮಲೆ ಮಹದೇಶ್ವರ ವನ್ಯಜೀವಿ ವ್ಯಾಪ್ತಿಯಲ್ಲಿ ಸಫಾರಿ ಪ್ರಾರಂಭ ಮಾಡಿರುವುದು ಈ ಭಾಗದ ವನ್ಯಪ್ರಿಯರಿಗೆ ಸಂತಸ ತಂದಿದೆ ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.

ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ ಪಿಜಿ ಪಾಳ್ಯ ವಿಭಾಗ ವ್ಯಾಪ್ತಿಯ ಲೊಕ್ಕನಹಳ್ಳಿಯಲ್ಲಿ ಸಫಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಚಾಮರಾಜನಗರ ಜಿಲ್ಲೆಯಲ್ಲಿ ಈಗಾಗಲೇ ಬಂಡಿಪುರ,ಕೆ ಗುಡಿ, ಅರಣ್ಯ ವ್ಯಾಪ್ತಿಯಲ್ಲಿ ಸಫಾರಿ ಹಲವು ವರ್ಷಗಳಿಂದ ನಡೆಯುತ್ತಿದೆ. ಕಾವೇರಿ ವನ್ಯ ಧಾಮದ ಗೋಪಿನಾಥಂನಲ್ಲಿ ಪ್ರಯೋಗವಾಗಿ ಸಫಾರಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಇದೀಗ ನಾಲ್ಕನೇ ಸಫಾರಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ವನ್ಯಜೀವಿ ಪ್ರಿಯರು ಹಾಗೂ ನಾಗರಿಕರು ಈ ಸಫಾರಿ ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅರಣ್ಯದಲ್ಲಿ ಯಾವುದೇ ಪ್ರಾಣಿಗಳಿಗೆ ತೊಂದರೆ ಮಾಡದೆ ಅರಣ್ಯ ಪ್ರದೇಶದಲ್ಲಿರುವ ವನ್ಯ ಸಂಪತ್ತು ಹಾಗೂ ಪ್ರಾಣಿಗಳನ್ನು ವೀಕ್ಷಿಸಲು ಒಳ್ಳೆಯ ಸದಾ ಅವಕಾಶ ಸಿಕ್ಕಿದೆ ಹೀಗಾಗಿ ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಜೀವನದಲ್ಲಿ ಎಷ್ಟೇ ಜಂಜಾಟವಿದ್ದರೂ ಈ ಅರಣ್ಯ ಪ್ರದೇಶಕ್ಕೆ ಬಂದು ಸಫಾರಿಗೆ ತೆರಳಿ ವನ್ಯ ಪ್ರಾಣಿಗಳನ್ನು ನೋಡಿದರೆ ಎಲ್ಲವನ್ನು ಮರೆತು ಬಿಡುತ್ತೇವೆ. ಪೋಷಕರುಗಳು ತಮ್ಮ ಮಕ್ಕಳನ್ನು ಸಫಾರಿಗೆ ಕರೆತಂದು ಅರಣ್ಯದಲ್ಲಿರುವ ವಿಶೇಷ ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳಲು ಸಹಕಾರ ನೀಡಬೇಕು ಎಂದರು.

ಪ್ರತಿದಿನ ಸಫಾರಿ ಬೆಳಗ್ಗೆ 6ರಿಂದ 9 ಗಂಟೆಯವರೆಗೆ, ಸಾಯಂಕಾಲ 3 ಗಂಟೆಯಿಂದ ಸಂಜೆ 6 ರವರೆಗೆ ಸಫಾರಿ ಇರಲಿದೆ.

ಕಾರ್ಯಕ್ರಮದಲ್ಲಿ ಮಲೆ ಮಾದೇಶ್ವರ ವನ್ಯಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್, ಕಾವೇರಿ ವನ್ಯಜೀವಿಧಾಮದ ಎಸಿಎಫ್ ಅಂಕರಾಜು, ಶಶಿಧರ್, ವಲಯ ಅರಣ್ಯಾಧಿಕಾರಿಗಳಾದ ಶಿವರಾಂ ಪ್ರಮೋದ್, ಪಿ ಜಿ ಪಾಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್, ಪರಿವರ್ತನಾ ಗ್ರಾಮ ಸಮಿತಿ ಅಧ್ಯಕ್ಷ ಎನ್ ಕೃಷ್ಣಮೂರ್ತಿ ಸೇರಿದಂತೆ ಇನ್ನಿತರರು ಹಾಜರಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ