Mysore
22
overcast clouds
Light
Dark

ನಾಳೆ ಸಂಸತ್‌ನಲ್ಲಿ ಪ್ರತಿಧ್ವನಿಸಲಿದೆ ನೀಟ್‌ ಅಕ್ರಮ; ಸರ್ಕಾರದ ಮೇಲೆ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜು

ನವದೆಹಲಿ: ನೀಟ್‌ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆ ಅಕ್ರಮ ಕುರಿತು ನಾಳೆ ಸಂಸತ್‌ನಲ್ಲಿ ಗದ್ದಲ ಹಾಗೂ ಕೋಲಾಹಲ ನಡೆಯಲಿದ್ದು, ಸರ್ಕಾರಕ್ಕೆ ಚಾಟಿ ಬೀಸಲು ವಿಪಕ್ಷಗಳು ಸಜ್ಜಾಗಿ ನಿಂತಿವೆ.

ವೈದ್ಯಕೀಯ ಪ್ರವೇಶ ಪರೀಕ್ಷೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆಗಳು ಹೆಚ್ಚಾಗಿವೆ. ಈ ವಿಷಯ ಈಗ ಸಂಸತ್‌ನಲ್ಲೂ ಗದ್ದಲ, ಕೋಲಾಹಲಕ್ಕೆ ಕಾರಣವಾಗಲಿದೆ. ಆದರೆ ಇದಕ್ಕೆ ಕೇಂದ್ರ ಸರ್ಕಾರ ಸಕಲ ರೀತಿಯಲ್ಲೂ ಸಿದ್ಧತೆ ನಡೆಸಿದ್ದು, ಪ್ರತಿಪಕ್ಷಗಳ ಆರೋಪಕ್ಕ ಉತ್ತರ ಕೊಡಲು ಸಜ್ಜಾಗಿದೆ.

ಪರೀಕ್ಷಾ ಅಕ್ರಮ ಸಂಬಂದ ಸಿಬಿಐ ತನಿಖೆ ಪ್ರಾರಂಭಿಸಿರುವುದರಿಂದ ಹಿಡಿದು ವಿಶೇಷ ಸಮಿತಿಯನ್ನು ರಚಿಸುವವರೆಗೂ ನೀಟ್‌ ಸಮಸ್ಯೆಯ ಬಗ್ಗೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಪರೀಕ್ಷಾ ಅಕ್ರಮದ ವಿಶೇಷ ಸಮಿತಿಯ ವರದಿ ಶೀಘ್ರವೇ ಬರುವ ನಿರೀಕ್ಷೆಯಿದೆ. ಇದಲ್ಲದೇ ಈ ಅಧಿವೇಶನದಲ್ಲಿ ವಂಚನೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಠಿಣ ನಿಯಮಗಳು ಜಾರಿಗೆ ಬರಲಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು. ದೃಢವಾದ ಶಿಕ್ಷಣ ವ್ಯವಸ್ಥೆಗೆ ಅಡಿಪಾಯ ಹಾಕಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮ ಸಂಬಂಧ ನಾಳೆ ಸಂಸತ್‌ನಲ್ಲಿ ಕೋಲಾಹಲವೇ ಸೃಷ್ಟಿಯಾಗಲಿದೆ ಎನ್ನಲಾಗಿದ್ದು, ಪ್ರತಿಪಕ್ಷಗಳ ಆರೋಪಕ್ಕೆ ಕೇಂದ್ರ ಸರ್ಕಾರ ಯಾವ ರೀತಿ ಉತ್ತರ ಕೊಡಲಿದೆ ಎಂಬುದನ್ನು ಕಾದುನೋಡಬೇಕಿದೆ.