Mysore
21
haze

Social Media

ಶನಿವಾರ, 24 ಜನವರಿ 2026
Light
Dark

ಕಡಿಮೆ ಖರ್ಚಲ್ಲಿ ಹೆಚ್ಚು ಬೆಳೆದವನು ಜಾಣ

ಡಿ.ಎನ್. ಹರ್ಷ

‘ಹತ್ತು ಕಟ್ಟುವುದಕ್ಕಿಂತ ಒಂದು ಮುತ್ತು ಕಟ್ಟು‘ ಎಂಬ ಗಾದೆಯನ್ನು ನಾವೆಲ್ಲಾ ಬಾಲ್ಯದಿಂದ ಕೇಳುತ್ತಾ ಬಂದಿದ್ದು, ಬೆರಳೆಣಿಕೆಯ ಮಂದಿ ಮಾತ್ರ, ಇದರ ಅರ್ಥ ತಿಳಿದುಕೊಂಡು ಯಶಸ್ವಿ ಆಗಿದ್ದಾರೆ. ನೂರು ವರ್ಷಗಳ ಹಿಂದೆ, ಪ್ರತಿಯೊಬ್ಬರೂ ಕೃಷಿಕನ ಮನೆ ಬಾಗಿಲಿಗೆ ಹೋಗಿ, ತಮಗೆ ಬೇಕಾದ ಆಹಾರ ಪಡೆದುಕೊಳ್ಳುತ್ತಾ ಇದ್ದ ಪರಿಸ್ಥಿತಿ ಸಹಜವಾಗಿತ್ತು.

ಕೃಷಿಕ ಅಂದು ಎಲ್ಲದಕ್ಕೂ ಕೇಂದ್ರ ಬಿಂದುವಾಗಿದ್ದ. ಆದರೆ ಹತ್ತಾರು ಎಕರೆ ಭೂಮಿ ಇಟ್ಟುಕೊಂಡು, ಸ್ವಾಭಿಮಾನದ ಕಾಯಕ ಮಾಡುವ ರೈತರ ಮಕ್ಕಳಿಗೆ ಸರಿಯಾಗಿ ಹೆಣ್ಣು ಸಿಗುತ್ತಾ? ಇಲ್ಲ ಎನ್ನುವುದು ವಾಸ್ತವ ಸತ್ಯ; ಹಾಗೆ ವಿಪರ್ಯಾಸ ಕೂಡ. ಕಾಲಚಕ್ರ ಉರುಳಿದಂತೆ ಮೇಲಿದ್ದವರು ಕೆಳಗೆ ಬರಬೇಕು ಎನ್ನುವ ಹಾಗೆ, ದೇಶದ ಬೆನ್ನೆಲುಬು ಎಂದು ಕರೆಸಿಕೊಳ್ಳುವ ರೈತ ಸಮಾಜದಲ್ಲಿ ಒಂದು ರೀತಿ ತಿರಸ್ಕರಿಸಲ್ಪಿಟ್ಟಿದ್ದಾನೆ. ಇದಕ್ಕೆ ಅನೇಕ ಕಾರಣಗಳನ್ನು ಹುಡುಕಬಹುದು.

ಎಲ್ಲ ಸಮಸ್ಯೆಗಳಿಗೂ ನಮ್ಮ ಸ್ವಯಂಕೃತ ಅಪರಾಧವೆ ಮುಖ್ಯ ಕಾರಣ. ಹಸಿರು ಕ್ರಾಂತಿಯ ನೆಪದಲ್ಲಿ ದೇಶದ ಜನರ ಹೊಟ್ಟೆ ತುಂಬಿಸಲು ಹೋಗಿ, ಇಂದು ಪ್ರಪಾತದ ಅಂಚು ತಲುಪಿದ್ದಾನೆ.

ಉದಾಹರಣೆಗೆ ಯಾರೋ ಟೊಮೇಟೊ ಹಣ್ಣು ಬೆಳೆದು ಲಕ್ಷಗಟ್ಟಲೆ ಸಂಪಾದನೆ ಮಾಡಿದ, ನಾನೂ ಹಾಗೆ ಮಾಡುತ್ತೇನೆ ಎನ್ನುವ ಅತಿ ಆಸೆ ಕೂಡ ಮತ್ತೊಂದು ಕಾರಣ ಆಗಿದೆ. ನಮ್ಮ ತಾತ ಮುತ್ತಾತರೆಲ್ಲಾ, ಕಾಲಕ್ಕೆ ತಕ್ಕ ಹಾಗೆ ಎಲ್ಲಾ ರೀತಿಯ ದವಸ ಧಾನ್ಯಗಳನ್ನು ಬೆಳೆದುಕೊಳ್ಳುತ್ತಾ ಇದ್ರು.

ಹೊಂಗೆ, ಬೇವು, ಹಿಪ್ಪೆ, ಇತ್ಯಾದಿ ಮರಗಳ ಹಸಿರು ಎಲೆಗಳ ಜೊತೆ, ಹಸು, ಎತ್ತು, ಎಮ್ಮೆ, ಮೇಕೆ, ಕುರಿ, ಕೋಳಿಗಳನ್ನು ಒಳಗೊಂಡ ಪಶುಪಾಲನೆ, ಭೂಮಿಗೆ ಅಗತ್ಯವಾಗಿದ್ದ ಗೊಬ್ಬರಗಳನ್ನು ಪೂರೈಕೆ ಮಾಡುತ್ತಾ ಇತ್ತು. ಈ ಸಹಜ ಗೊಬ್ಬರಗಳಲ್ಲಿ ಭೂಮಿಯ ಸಾರವನ್ನು ಹೆಚ್ಚಿಸುವ ಉಪಯುಕ್ತ ಸೂಕ್ಷ್ಮಜೀವಿಗಳು ಯಥೇಚ್ಛವಾಗಿದ್ದು, ಜೈವಿಕ ಸಮತೋಲನ ಸಹಜವಾಗಿತ್ತು. ಗೋವುಗಳ ಮೂಲಕ, ಮರಮುಟ್ಟುಗಳಿಂದ ಮಾಡಿದ್ದ ಕಡಿಮೆ ತೂಕದ ನೇಗಿಲು ಉಳುಮೆ, ಕೂಡ ಸಹಜ ಕೃಷಿಗೆ ಪೂರಕವಾಗಿತ್ತು.

ಸಾವಿರಾರು ವರ್ಷಗಳಿಂದ ಜೀವನ ಧರ್ಮದ ಹಾಗೆ, ನಿತ್ಯ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಸಾವಿಲ್ಲದ ಸಹಜ ಕೃಷಿ, ಕೆಲವೇ ದಶಕಗಳಲ್ಲಿ ಏಕೆ ಅವಸಾನದ ಅಂಚು ತಲುಪಿದೆ? ಸಾಲದ ಕೂಪಕ್ಕೆ ಸಿಕ್ಕು, ಕೃಷಿಕ ಏಕೆ ಆತ್ಮಹತ್ಯೆ ಹಾದಿಯನ್ನು ತುಳಿಯುತ್ತಾ ಇದ್ದಾನೆ? ಇಪ್ಪತ್ತರ ಆಸುಪಾಸಿನಲ್ಲಿ ಮದುವೆ ಆಗುತ್ತಾ ಇದ್ದ, ಅನ್ನದಾತನಿಗೆ ಮೂವತ್ತು ದಾಟಿದ್ರು ಏಕೆ ಕನ್ಯೆ ಸಿಗುತ್ತಾ ಇಲ್ಲ? ಈ ರೀತಿಯ ಅನೇಕ ಪ್ರಶ್ನೆಗಳಿಗೆ ಉತ್ತರ ಹುಡುಕಿದ್ರೆ ರೈತನ ಬದುಕು ಹಸನಾಗಿ, ಮತ್ತೆ ಮುನ್ನೆಲೆಗೆ ಬರಬಹುದು. ಕೈಗಾರಿಕಾ ಕ್ರಾಂತಿ ಎನ್ನುವ ಒತ್ತಡದಿಂದ ಮರೆಯಾಗುತ್ತಾ ಇದ್ದ ಸಹಜ ಕೃಷಿಯ ಮಹತ್ವವನ್ನು ಮತ್ತೆ ಅಂಕಿ ಅಂಶಗಳ ಮೂಲಕ ತೋರಿಸಿಕೊಟ್ಟ ಜಪಾನಿನ ಮಸನೊಬು ಫುಕುವೋಕರ ಸಹಜ ಕೃಷಿಯ ನಾಲ್ಕು ತತ್ವಗಳನ್ನು ಮತ್ತೆ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿ, ಯಶಸ್ವಿಯಾಗಿರುವ ಕೃಷಿಕರನ್ನು ಹುಡುಕಿದರೆ ಸಿಗುತ್ತಾರೆ.

ರಾಗಿ, ಭತ್ತ, ದ್ವಿದಳ ಧಾನ್ಯಗಳು, ತರಕಾರಿ ಮುಂತಾದ ಬೆಳೆ ಬೆಳೆಯಲು ಉಳುಮೆ ಅಗತ್ಯವಾಗಿದ್ದು, ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಉಳುಮೆ ಅಗತ್ಯ ಇರುವುದಿಲ್ಲ. ಮಣ್ಣಿನ ಫಲತ್ತತೆಯನ್ನು ನಾಶ ಮಾಡಿರುವ ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳನ್ನು ಹಂತ ಹಂತವಾಗಿ ತ್ಯಜಿಸುವ ಮೂಲಕ, ಪದ್ಮಶ್ರೀ ಸುಭಾಷ್ ಪಾಳೇಕರ್‌ರವರು, ತಿಳಿಸುವ ಹಾಗೆ ಸ್ವಾಭಾವಿಕ ಹೊದಿಕೆ ಹೆಚ್ಚು ಮಾಡಿ, ಜೀವಾಮೃತ ಇತ್ಯಾದಿ ನೈಸರ್ಗಿಕ ಗೊಬ್ಬರಗಳನ್ನು ನಮ್ಮ ಜಮೀನಿನಲ್ಲಿ ತಯಾರು ಮಾಡಿಕೊಂಡು, ಬಳಕೆ ಮಾಡುವುದರಿಂದ ಮತ್ತೆ ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಗೊಳಿಸಿಕೊಳ್ಳಬಹುದು.

ಒಂದು ಎಕರೆ ಪ್ರದೇಶದಲ್ಲಿ ವ್ಯವಸಾಯ ಮಾಡಲು, ಟ್ರಾಕ್ಟರ್ ಉಳುಮೆ, ಹೈಬ್ರಿಡ್ ಬೀಜ, ರಾಸಾಯನಿಕ ಗೊಬ್ಬರ ಇತ್ಯಾದಿಗಳಿಗೆ ಕನಿಷ್ಠ ಹದಿನೈದು ಸಾವಿರ ರೂ. ಖರ್ಚು ಆಗುತ್ತೆ ಎಂದು ಸರ್ವೇ ತಿಳಿಸುತ್ತೆ. ಆದರೆ ರೈತನಿಗೆ, ತಾನು ಹಾಕಿರುವ ಬಂಡವಾಳ ವಾಪಸ್ಸು ಬರುತ್ತೆ ಎನ್ನುವ ಖಾತ್ರಿ ಇಲ್ಲದ ಪರಿಸ್ಥಿತಿ ಇದೆ. ಹೀಗಾಗಿ ತಾನು ಮಾಡುವ ಎಲ್ಲಾ ಕೃಷಿ ಖರ್ಚುಗಳ ವಿವರಗಳನ್ನು ನಿತ್ಯವೂ ಬರೆಯುವ ಅಭ್ಯಾಸ ರೂಢಿಸಿಕೊಂಡು, ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿಕೊಂಡರೆ ಮಾತ್ರ ರೈತ ಸ್ವಾವಲಂಬಿ ಆಗಬಹುದು. ನೂರು ರೂಪಾಯಿ ಖರ್ಚು ಮಾಡಿ, ನೂರ ಇಪ್ಪತ್ತು ರೂಪಾಯಿ ಆದಾಯ ಮಾಡುವುದಕ್ಕಿಂತ, ಹೆಚ್ಚು ಖರ್ಚು ಮಾಡದೆ ಮೂವತ್ತು ರೂಪಾಯಿ ಆದಾಯ ಮಾಡುವುದು ಜಾಣತನ. ಒಂದೇ ಬಾರಿಗೆ ಲಕ್ಷ ಲಕ್ಷ ಸಂಪಾದನೆ ಮಾಡಬೇಕು ಎನ್ನುವ ಅತಿ ಆಸೆಯಿಂದ ಹತ್ತಾರು ರೀತಿಯ ರಾಸಾಯನಿಕ ಬಳಕೆ ಕೃಷಿ ಮಾಡಿ ಕೈ ಸುಟ್ಟುಕೊಳ್ಳುವುದಕಿಂತ, ಹಿಂದಿನಿಂದ ಬಂದಿರುವ ನಮ್ಮ ದೇಶಿ ಪದ್ಧತಿಯಲ್ಲಿ ಒಂದು ಮುತ್ತು ಕಟ್ಟುವ ರೀತಿ ಕೃಷಿ ಮಾಡುವುದು ಇಂದು ಪ್ರಸ್ತುತ ಮತ್ತು ಅಗತ್ಯವಾಗಿದೆ.

೧) ಉಳುಮೆ ಮಾಡದಿರುವುದು
೨) ರಾಸಾಯನಿಕ ಗೊಬ್ಬರವನ್ನು ಬಳಕೆ ಮಾಡದಿರುವುದು
೩) ಉಳುಮೆ ಅಥವಾ ಕಳೆನಾಶಕದಿಂದ ಕಳೆಯ ನಿರ್ಮೂಲನೆಗೆ ಪ್ರಯತ್ನಿಸದಿರುವುದು
೪) ರಾಸಾಯನಿಕ ಕ್ರಿಮಿನಾಶಕಗಳನ್ನು ಅವಲಂಬಿಸದಿರುವುದು
ಫುಕುವೋಕರ ಈ ನಾಲ್ಕು ತತ್ವಗಳನ್ನು ನಮ್ಮ ಭೂಮಿಯ ಪರಿಸ್ಥಿತಿಗೆ ಅನುಗುಣವಾಗಿ ವಿವಿಧ ರೀತಿಯ ಬೆಳೆಗಳಿಗೆ ತಕ್ಕ ಹಾಗೆ ಮಾರ್ಪಾಟು ಮಾಡಿಕೊಳ್ಳಬಹುದಾಗಿದೆ.

Tags:
error: Content is protected !!