Mysore
26
overcast clouds

Social Media

ಶುಕ್ರವಾರ, 25 ಏಪ್ರಿಲ 2025
Light
Dark

ಕಾಶ್ಮೀರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನ ಹತ್ಯೆ

ಜಮ್ಮು-ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ದೋಖಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್.‌11 ಮತ್ತು 12 ರಂದು ಗುಡ್ಡಗಾಡು ಜಿಲ್ಲೆಯಲ್ಲಿ ನಡೆದ ಅವಳಿ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸೇನೆ ಮತ್ತು ಕೇಂದ್ರ ಮೀಸಲು ಪೊಲೀಸ್‌ ಜೊತೆ ಪೊಲೀಸರು ತೀವ್ರ ಶೋಧ ಮತ್ತು ಕಾರ್ಯಾಚರಣೆ ನಡೆಸುತ್ತಿದ್ದು, ಇಂದು ಬೆಳಿಗ್ಗೆ ಗಂಡೋ ಪ್ರದೇಶದ ಬಜಾದ್‌ ಗ್ರಾಮದಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆದಿದೆ.

ಜೂನ್.‌11ರಂದು ಚತ್ತರಗಲ್ಲದ ಚೆಕ್‌ಪೋಸ್ಟ್‌ ಮೇಲೆ ಭಯೋತ್ಪಾದಕರು ದಾಳಿ ಮಾಡಿದಾಗ ಆರು ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಮರುದಿನ ಗಂಡೋ ಪ್ರದೇಶದ ಕೋಟಾದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬರು ಪೊಲೀಸ್‌ ಅಧಿಕಾರಿ ಗಾಯಗೊಂಡಿದ್ದರು. ಈ ಅವಳಿ ದಾಳಿಯ ನಂತರದಲ್ಲಿ ಭದ್ರತಾ ಪಡೆಗಳು ತಮ್ಮ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದವು. ಗಡಿ ನುಸುಳಿದ ನಾಲ್ವರು ಪಾಕಿಸ್ತಾನಿ ಭಯೋತ್ಪಾದಕರ ತಲೆಗೆ ತಲಾ 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದರು.

ಇಂದು ಭದ್ರತಾ ಪಡೆಗಳ ಸಹಾಯದಿಂದ ಪೊಲೀಸರು ಸಿನೂ ಪಂಚಾಯತ್‌ ಗ್ರಾಮದಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದರು. ಆದರೆ ಮಣ್ಣಿನ ಮನೆಯಲ್ಲಿ ಅಡಗಿದ್ದ ಭಯೋತ್ಪಾದಕರು ಪೊಲೀಸರ ಮೇಲೆ ಭಾರೀ ಗುಂಡಿನ ದಾಳಿ ನಡೆಸಿದರು. ಪ್ರತೀಕಾರದ ಗುಂಡಿನ ದಾಳಿಯಲ್ಲಿ ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಯಿತು ಎಂದು ಅಧಿಕಾರಿಯೋರ್ವರು ಹೇಳಿದ್ದಾರೆ.

ಈ ಮಧ್ಯೆ ರಜೌರಿ ಜಿಲ್ಲೆಯ ಚಿಂಗಸ್‌ ಪ್ರದೇಶದ ಪಿಂಡ್‌ ಎಂಬ ಹಳ್ಳಿಯಲ್ಲಿ ಚೀನಾ ನಿರ್ಮಿತ ಕೈ ಗ್ರೆನೇಡ್‌ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Tags: