ಹುಬ್ಬಳ್ಳಿ: 2022ರ ಏಪ್ರಿಲ್‌ನಲ್ಲಿ ನಡೆದ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ವಾಪಸ್ ಪಡೆದುರುವುದನ್ನು ಪ್ರಶ್ನಿಸಿ ಬಿಜೆಪಿ ಶಾಸಕರು ಮನವಿ ಸಲ್ಲಿಸಲು ಮುಂದಾದರೆ ಅದನ್ನು ಸಿಎಂ ಸಿದ್ದರಾಮಯ್ಯ ಸ್ವೀಕರಿಸದೇ ದುರಹಂಕಾರ ತೋರಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ನಗರದಲ್ಲಿ ಇಂದು(ಅಕ್ಟೋಬರ್.13) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನವಿ ಪತ್ರ ಸಲ್ಲಿಸಲು ಬಿಜೆಪಿ ಶಾಸಕರು ಹಾಗೂ ಕಾರ್ಯಕರ್ತರು ಹೋದರೆ ಮುಖ್ಯಮಂತ್ರಿ ಭದ್ರತೆ ಎಂಬ ನೆಪವೊಡ್ಡಿ ಅವರನ್ನು ತಡೆಯುತ್ತಿದ್ದಾರೆ. ಒಂದು ರಾಜ್ಯದ ಮುಖ್ಯಮಂತ್ರಿಗೆ ಆ ರಾಜ್ಯದ ವಿರೋಧ ಪಕ್ಷದ ಶಾಸಕರು ಮನವಿ ಸಲ್ಲಿಸುವುದೇ ತಪ್ಪಾ? ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಶಾಸಕರು ಹಾಗೂ ಕಾರ್ಯಕರ್ತರ ಮನವಿಯನ್ನು ಸ್ವೀಕರಿಸಲೇಬೇಕು. ಇಲ್ಲವಾದರೆ, ಸಿಎಂ ಒಬ್ಬರೂ ಮತಾಂಧ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ರುಜುವಾತು ಆಗುತ್ತದೆ. ಹೀಗಾಗಿ ಸಿದ್ದರಾಮಯ್ಯ ಅವರು ಮನವಿಯನ್ನು ಸ್ವೀಕಾರಿಸಲೇಬೇಕು. ಇಲ್ಲವಾದರೆ ಸಿಎಂ ವಿರುದ್ಧ ತೀವ್ರವಾಗಿ ಹೋರಾಟ ನಡೆಸಲಾಗುತ್ತದೆ. ಒಂದು ವೇಳೆ ಹೋರಾಟದ ಸಂದರ್ಭದಲ್ಲಿ ಶಾಸಕರು ಮತ್ತು ಕಾರ್ಯಕರ್ತರನ್ನು ಬಂಧಿಸಿ ಜೈಲಿಗಟ್ಟಿದ್ದರೂ ಸರಿಯೇ ನಾವು ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮನವಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿಯೇ ತಿರುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.