Mysore
19
overcast clouds

Social Media

ಭಾನುವಾರ, 25 ಜನವರಿ 2026
Light
Dark

ಬಿಳಿಗಿರಿ ರಂಗನಬೆಟ್ಟ ಅಭಿವೃದ್ಧಿ ಕಾರ್ಯ ಪರಿಶೀಲನೆಯಲ್ಲಿದೆ : ಸಚಿವ .ಎಚ್.ಕೆ.ಪಾಟೀಲ್‌

ಬೆಳಗಾವಿ : ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಪುರಾಣ ಪ್ರಸಿದ್ಧ ಕ್ಷೇತ್ರವಾಗಿರುವ ಬಿಳಿಗಿರಿ ರಂಗನಬೆಟ್ಟ ಪ್ರದೇಶವನ್ನು 5.75 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾರ್ಯ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಹೇಳಿದರು.

ಪ್ರಶ್ನೋತ್ತರ ಕಲಾಪದಲ್ಲಿ ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಪ್ರಶ್ನೆಗೆ ಉತ್ತರಿಸಿದ ಅವರು,ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೆ ದೇವಾಲಯದ ಸುತ್ತ 01 ಕೋಟಿ ರೂ. ವೆಚ್ಚದಲ್ಲಿ ನೆಲಹಾಸು ಕಾಮಗಾರಿ ಪೂರ್ಣಗೊಳಿಸಲಾಗಿದೆ. ಬೆಟ್ಟದಲ್ಲಿ ಸುಸಜ್ಜಿತ ಬಸ್ ನಿಲ್ದಾಣ, ನಂದಿ ಬೆಟ್ಟದಲ್ಲಿನ ಮಾದರಿಯಲ್ಲಿ ವೀಕ್ಷಣಾ ಗೋಪುರಗಳು, ದಾಸೋಹ, ಅಡುಗೆ ಮನೆ ಸೇರಿದಂತೆ ಸಮಗ್ರ ಅಭಿವೃದ್ಧಿಗಾಗಿ 5.75 ಕೋಟಿ ರೂ. ವೆಚ್ಚದ ವಿವರವಾದ ಪರಿಕಲ್ಪನಾ ವರದಿಗೆ ಅನುಮೋದದನೆ ನೀಡಿ, ಅಗತ್ಯ ಅನುದಾನ ನೀಡುವ ಕಾರ್ಯ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು.

ಬಿಳಿಗಿರಿ ರಂಗನಾಥ ದೇವಾಲಯ ಬಳಿ ಮೆಟ್ಟಿಲು ಹಾಗೂ ರೈಲಿಂಗ್ಸ್ ನಿರ್ಮಾಣ ಕಾಮಗಾರರಿಯನ್ನು ಪ್ರಾರಂಭಿಸಿ, ಕಲ್ಯಾಣಿ ರಸ್ತೆ, ರಥದ ಬೀದಿ ಕಾಂಕ್ರಿಟ್ ರಸ್ತೆ ಪೂರ್ಣಗೊಳಿಸಲಾಗಿದೆ. ಇದಕ್ಕಾಗಿ 1.05 ಕೋಟಿ ರೂ. ವೆಚ್ಚವಾಗಿದ್ದು, ದೇವಸ್ಥಾನದ ಪಾದುಕೆಯಿಂದ ರಾಜಗೋಪುರಕ್ಕೆ ಕಾಲಂಗಳೊಂದಿಗೆ ಮೆಟ್ಟಿಲುಗಳ ವಿನ್ಯಾಸ ಪಡೆಯಲಾಗಿದೆ. ಮೈಸೂರು ವೃತ್ತದ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಅಭಿಯಂತರರು ಹಾಗೂ ಕಾರ್ಯಪಾಲಕ ಅಭಿಯಂತರರು, ಕಾಮಗಾರಿ ಕುರಿತು ಪರಿವೀಕ್ಷಣೆ ನಡೆಸಿದ ಸಂದರ್ಭದಲ್ಲಿ ಕಾಮಗಾರಿ ಸ್ಥಳದಲ್ಲಿ ಪಾಕೆಟ್ ರಾಕ್ಸ್ ಕಂಡುಬಂದ ಕಾರಣ ಬದಲಿ ಅಲೈನ್‍ಮೆಂಟ್ ಪರಿಶೀಲಿಸಿ, ಮರುವಿನ್ಯಾಸ ಪಡೆದು, ನಂತರವೇ ಕಾಮಗಾರಿ ನಿರ್ವಹಿಸಲು ನಿರ್ದೇಶನ ನೀಡಿದ್ದಾರೆ ಎಂದರು.

ಬದಲಿ ಅಲೈನ್‍ಮೆಂಟ್ ಮರುವಿನ್ಯಾಸದ ಅಂದಾಜು ಪಟ್ಟಿ ತಯಾರಿಸಿದ್ದು, ಇದನ್ನು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಆಗಮಿಕರೊಂದಿಗೆ ಚರ್ಚಿಸಿ, ಬಳಿಕವೇ ಉಳಿದ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಪ್ರವಾಸೋದ್ಯಮ ಇಲಾಖೆ ಆಯುಕ್ತರು ವರದಿ ಸಲ್ಲಿಸಿದ್ದಾರೆ. ಈ ವರದಿಯ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ, ಶೀಘ್ರವೇ ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ, ಬಿಳಿಗಿರಿ ರಂಗನಬೆಟ್ಟದ ಮೆಟ್ಟಿಲು ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದರು.

Tags:
error: Content is protected !!