ಮಂಡ್ಯ: ಮುಂದಿನ ವರ್ಷ ಯುಗಾದಿ ಹೊತ್ತಿಗೆ ರೈತರಿಗೆ ಹೊಸ ಆಯಾಮದ ಕೃಷಿ ಬಿತ್ತನೆಗಳನ್ನ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸಂಶೋಧನಾ ನಿರ್ದೇಶಕ ಡಾ. ಎಚ್ ಎಸ್ ಶಿವರಾಮ್ ತಿಳಿಸಿದರು.
ಅವರು ಇಂದು ಮಂಡ್ಯದ ವಿ.ಸಿ ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ರೈತರು ಬಿತ್ತನೆ ಮಾಡುವುದಕ್ಕೆ ಸಾಕಷ್ಟು ಹೊಸ ಹೊಸ ತಳಿಗಳು ಮಾರುಕಟ್ಟೆಗೆ ಬಂದಿವೆ ಅದರ ಬಳಕೆ ಮಾಡಿಕೊಳ್ಳಿ ಎಂದರು. ಹೈನುಗಾರಿಕೆ, ಕೃಷಿಗಾರಿಕೆ, ಪಶು ಸಂಗೋಪನೆ ಸೇರಿದಂತೆ ಎಲ್ಲಾ ರೀತಿಯ ಕೃಷಿಗೆ ಸಂಬಂಧಿಸಿರುವ ಅಂಶಗಳಿಗೆ ರೈತರು ಹೆಚ್ಚಿನ ಪ್ರಾಮುಖ್ಯತೆ ನೀಡಿ ಎಂದರು.
ಮಂಡ್ಯ ಮತ್ತು ಭದ್ರಾವತಿ ಭಾಗದಲ್ಲಿ ಮೊದಲು ಬೆಲ್ಲ ತಯಾರಿಕೆಯಲ್ಲಿ ರಾಸಾಯನಿಕ ಉಪಯೋಗಿಸುತ್ತಿದ್ದರು ಅದು ಆರೋಗ್ಯಕ್ಕೆ ಮಾರಕ ಎಂದು ಬಹುಕೊಪ್ಪರಿಕೆ ಮಾದರಿಯಲ್ಲಿ ರಾಸಾಯನಿಕ ಮುಕ್ತ ಬೆಲ್ಲವನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೇವೆ ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದರು.
ಕೃಷಿ ಮೇಳದಲ್ಲಿ ಸಾವಿರಾರು ಜನ ಸೇರಿದ್ದು ಹೆಮ್ಮೆಯ ವಿಷಯ. ರೈತರು ಮೇಳದ ಸಂಪೂರ್ಣ ಉಪಯೋಗ ಪಡೆದುಕೊಳ್ಳಬೇಕು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಹೆಚ್ಚು ಆದಾಯ ಗಳಿಸಿಕೊಳ್ಳಿ ಹಾಗೂ ಕೃಷಿ ಇಲಾಖೆಯ ಎಲ್ಲ ಸೇವೆಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು..
ಕೃಷಿ ಮೇಳ ರೈತರ ಹಬ್ಬ: ಡಾ ವೈ ಎನ್ ಶಿವಲಿಂಗಯ್ಯ
ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕರಾದ ಡಾ. ವೈ ಎನ್ ಶಿವಲಿಂಗಯ್ಯ ಮಾತನಾಡಿ, ಕೃಷಿ ಮೇಳವು ಸಾಮಾನ್ಯವಾಗಿ ರೈತರಿಗೆ ಹಬ್ಬವಿದ್ದಂತೆ. ರೈತರಿಗೆ ಉಪಯೋಗವಾಗುವಂತಹ ಸಾಕಷ್ಟು ವಿಷಯ ಅಂಶಗಳನ್ನು ಈ ಕೃಷಿ ಮೇಳದಲ್ಲಿ ಅನಾವರಣಗೊಳಿಸಲಾಗಿದೆ. ಮೇಳದ ಸದುಪಯೋಗವನ್ನು ಕೃಷಿಕ ಮಂದಿಯವರು ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಒಂದು ಕಾರ್ಯಕ್ರಮ ಯಶಸ್ಸು ಕಾಣಬೇಕು ಎಂದರೆ ಕಾರ್ಯಕ್ರಮಕ್ಕೆ ಎಷ್ಟು ಜನ ವೀಕ್ಷಕರು ಬಂದಿದ್ದರು ಎಂಬುವುದು ಮುಖ್ಯವಾಗುತ್ತದೆ ಆದರೆ ಕೃಷಿ ಮೇಳವನ್ನು ಎರಡು ದಿನ ಆಯೋಜನೆ ಮಾಡಿದ್ದು ನಿಜಕ್ಕೂ ಸಂತಸದ ವಿಷಯ ಮತ್ತು ಕಾರ್ಯಕ್ರಮದಲ್ಲಿ ಸಾಕಷ್ಟು ಜನ ಭಾಗವಹಿಸಿದ್ದರು ಎಂದು ಹೇಳಿದರು.
ರೈತರೇ ದೇಶದ ಬೆನ್ನೆಲುಬಾಗಿರುವಾಗ ಮೊದಲು ನಾವೆಲ್ಲರೂ ರೈತರಿಗೆ ರೈತರು ಮಾಡುವ ಕೃಷಿಗೆ ಬೆಲೆ ಕೊಡಬೇಕು ಎಂದರು. ಹೆಚ್ಚಾಗಿ ಹೈನುಗಾರಿಕೆಗೆ ಹೆಚ್ಚು ಒತ್ತನ್ನು ನೀಡಿ, ನಾಟಿ ತಳಿ ಫಾರಂ ತಳಿ ಎಂಬ ವಿಧವಾದ ತಳಿಗಳು ಸಾಕಷ್ಟಿದೆ ಅದರ ಉಪಯೋಗ ಪಡೆದುಕೊಳ್ಳಿ ಎಂದರು.
ಇದೇ ಸಂದರ್ಭದಲ್ಲಿ ವೇದಿಕೆಯ ಮೇಲೆ ಕೃಷಿ ಮೇಳದಲ್ಲಿ ಆಯೋಜನೆ ಮಾಡಿದ್ದ ಕೃಷಿಗೆ ಸಂಬಂಧಿಸಿದ ಪ್ರದರ್ಶನಗಳಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಂಡ್ಯ ವಿ ಸಿ ಫಾರಂ ಕೃಷಿ ಮಹಾವಿದ್ಯಾಲಯ ಡೀನ್ (ಕೃಷಿ ) ಹಾಗೂ ಆವರಣದ ಮುಖ್ಯಸ್ಥರು ಡಾ ಪಿ ಎಸ್ ಫಾತಿಮಾ, ಮಂಡ್ಯ ವಿ ಸಿ ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ ಎನ್ ಶಿವಕುಮಾರ್, ಮಂಡ್ಯ ವಿ. ಸಿ ಫಾರಂನ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ.ಕಮಲಾಬಾಯಿ ಕೂಡಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.