Mysore
16
clear sky

Social Media

ಶುಕ್ರವಾರ, 30 ಜನವರಿ 2026
Light
Dark

ಡಿಜಿಟಲ್‌ ಅರೆಸ್ಟ್‌ ಪ್ರಕರಣ ಸಿಬಿಐ ಹೆಗಲಿಗೆ

ಹೊಸದಿಲ್ಲಿ : ದೇಶಾದ್ಯಂತ ವರದಿಯಾಗುತ್ತಿರುವ ಎಲ್ಲಾ ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ವಹಿಸಿ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ಜಾರಿ ಮಾಡಿದ ಕೋರ್ಟ್‌ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ಸಿಬಿಐಗೆ ವರ್ಗಾಯಿಸುವಂತೆ ಸೂಚಿಸಿದೆ.

ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ನೇತೃತ್ವದ ಪೀಠವು ಇದು ಪ್ಯಾನ್‌ ಇಂಡಿಯಾ ಮತ್ತು ಗಡಿಯಾಚೆಗಿನ ವಂಚನೆ ಎಸಗಿದ ಪ್ರಕರಣವಾಗಿರುವ ಕಾರಣ ಏಕರೂಪದ ಕೇಂದ್ರೀಕೃತ ತನಿಖೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು ಸಿಬಿಐ ತನಿಖೆಗೆ ಆದೇಶಿಸಿದೆ.

ವಿದೇಶದಲ್ಲೂ ಇದರ ಕೊಂಡಿ ಇರುವುದರಿಂದ ಈ ಪ್ರಕರಣದ ತನಿಖೆಗೆ ಜಾಗತಿಕ ಸಹಕಾರದ ಅಗತ್ಯವಿದೆ. ಹೀಗಾಗಿ ವಿಶ್ವಸಂಸ್ಥೆಯ ಸಮಾವೇಶದಲ್ಲಿ ಸೈಬರ್ ಅಪರಾಧದ ವಿರುದ್ಧ ನಿರ್ಣಯ ಅಂಗೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಕೋರ್ಟ್‌ ಸೂಚಿಸಿದೆ.

ಇದನ್ನೂ ಓದಿ:-ಕಾಫಿತೋಟದಲ್ಲಿ ಕಾಣೆಯಾಗಿದ್ದ 2 ವರ್ಷದ ಬಾಲಕಿ ; ಪತ್ತೆಹಚ್ಚಿದ ಶ್ವಾನ !

ಕಳೆದ ವಿಚಾರಣೆ ವೇಳೆ ದೇಶಾದ್ಯಂತ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನ ನಿರ್ವಹಿಸಲು ಸಿಬಿಐಗೆ ಸಂಪನ್ಮೂಲಗಳಿವೆಯೇ ಎಂದು ಕೇಂದ್ರವನ್ನು ಪ್ರಶ್ನಿಸಿತ್ತು ಆಗ ಸಿಬಿಐ ಈಗಾಗಲೇ ಕೆಲವು ಪ್ರಕರಣಗಳನ್ನು ನಿಭಾಯಿಸುತ್ತಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಪೀಠಕ್ಕೆ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಬಾಗ್ಚಿ, ಎಲ್ಲಾ ಪ್ರಕರಣಗಳನ್ನ ನಿರ್ವಹಿಸಲು ಸಿಬಿಐ ಬಳಿ ಅಗತ್ಯ ಸಂಪನ್ಮೂಲಗಳಿವೆಯೇ ಪರಿಶೀಲಿಸುವಂತೆ ಸೂಚಿಸಿದ್ದರು.

ಡಿಜಿಟಲ್ ಅರೆಸ್ಟ್ ಎಂದರೇನು?
ಡಿಜಿಟಲ್ ಅರೆಸ್ಟ್‌ ಸೈಬರ್ ವಂಚನೆಯ ಒಂದು ವಿಧಾನ. ಇದರಲ್ಲಿ ವಂಚಕರು ಕಾನೂನು ಅಧಿಕಾರಿಗಳಂತೆ ಪೋಸ್ ನೀಡುತ್ತಾರೆ. ಆಡಿಯೊ ಅಥವಾ ವೀಡಿಯೊ ಕರೆಗಳಲ್ಲಿ ಜನರನ್ನು ಬೆದರಿಸುತ್ತಾರೆ. ಬಂಧನದ ಸುಳ್ಳು ನೆಪದಲ್ಲಿ ಡಿಜಿಟಲ್ ಒತ್ತೆಯಾಳುಗಳನ್ನಾಗಿ ಮಾಡಿ ಹಣವನ್ನು ಸುಲಿಗೆ ಮಾಡುತ್ತಾರೆ.

Tags:
error: Content is protected !!