ಬೆಳಗಾವಿ: ವಿಜಯೇಂದ್ರ ನೀನು ಇನ್ನು ಬಚ್ಚಾ, ಅಧ್ಯಕ್ಷ ಸ್ಥಾನಕ್ಕೆ ಯೋಗ್ಯನಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗೋಕಾಕ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಜಗಳವಿರುವುದು ಅಧ್ಯಕ್ಷ ಸ್ಥಾನ ಬದಲಾವಣೆಗೆ ಮಾತ್ರ. ಅಧ್ಯಕ್ಷ ಸ್ಥಾನ ಬದಲಾವಣೆ ಆಗದಿದ್ದರು ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.
ಯಡಿಯೂರಪ್ಪ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಮೇಲೆ ನಮಗೆ ಈಗಲೂ ಗೌರವವಿದೆ. ಅವರ ಹೆಸರಿನಲ್ಲಿ ನೀನು ಸುಳ್ಳು ಹೇಳುವುದನ್ನು ಮೊದಲು ಬಿಡು. ನಿನ್ನ ಮೇಲೆ ನನಗೆ ಗೌರವವಿಲ್ಲ, ಅಧ್ಯಕ್ಷ ಸ್ಥಾನದ ಮೇಲೆ ಮಾತ್ರ ಗೌರವ ಎಂದು ಹೇಳಿದರು.
ನಿನ್ನನ್ನು ರಾಜ್ಯದಲ್ಲಿ ಓಡಾಡದ ಹಾಗೆ ನಿಯಂತ್ರಿಸುವ ಶಕ್ತಿ ನಮಗಿದೆ. ಆದರೆ ನಿನ್ನ ಹಾಗೆ ಕೀಳು ಮಟ್ಟದ ರಾಜಕೀಯಕ್ಕೆ ಇಳಿಯುವುದಿಲ್ಲ. ಪಕ್ಷಕ್ಕೆ ಬಂದು ಮೂರು ವರ್ಷ ಆಯಿತು ಎಂದು ಹೇಳುತ್ತಿಯಾ. ನಿಮ್ಮ ಅಪ್ಪನ ಹರಾಮಿ ದುಡ್ಡಲ್ಲಿ ಒಡಾಡ್ತಿದ್ದೀಯಾ ಎಂದು ವಾಗ್ದಾಳಿ ನಡೆಸಿದರು.
ಬಸನಗೌಡ ಪಾಟೀಲ್ ಯತ್ನಾಳ್ ಬಹುಸಂಖ್ಯಾತ ಜನರಿಗೆ ಬೇಕಾಗಿರುವ ವ್ಯಕ್ತಿ ಆದ ಕಾರಣ ನಾವು ಅವರನ್ನು ಒಪ್ಪಿಕೊಂಡಿದ್ದೇವೆ. ಲಿಂಗಾಯಿತರಲ್ಲಿ ಇನ್ನು ಸಾಕಷ್ಟು ಹಿರಿಯ ನಾಯಕರಿದ್ದಾರೆ. ನೀನು ಇನ್ನು ಸಣ್ಣ ಹುಡುಗ ನಿನು ಅಧ್ಯಕ್ಷ ಸ್ಥಾನಕ್ಕೆ ಯೋಗ್ಯನಲ್ಲ. ಆಗಲೂ ಹೈಕಮಾಂಡ್ ಮುಂದುವರೆಸಿದರೆ ಪಕ್ಷದ ನಿರ್ಣಯವನ್ನು ನಾನು ಸ್ವಾಗತ ಮಾಡುತ್ತೇನೆ ಏಂದು ಹೇಳಿದರು.
ನನ್ನಿಂದ ಏನಾದರೂ ತಪ್ಪಾಗಿದ್ದರೆ ನನ್ನ ಕ್ಷೇತ್ರದ ಜನರಲ್ಲಿ ಕ್ಷಮೆ ಕೇಳುತ್ತೇನೆ. 2028 ಕ್ಕೆ ಬಿಜೆಪಿ ಪಕ್ಷ ಅಧಿಕಾರ ತರುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.