Mysore
23
overcast clouds

Social Media

ಬುಧವಾರ, 14 ಜನವರಿ 2026
Light
Dark

ಎತ್ತಿನಹೊಳೆ: ಕೋಲಾರಕ್ಕೆ ಮೊದಲ ಆದ್ಯತೆ

Yettinahole project is top priority for Kolar

ಕೋಲಾರ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಮೊದಲ ಆದ್ಯತೆ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದು ನಗರಾಭಿವೃದ್ಧಿ, ನಗರ ಯೋಜನೆ ಮತ್ತು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಸುರೇಶ ತಿಳಿಸಿದ್ದಾರೆ.

ಸೋಮವಾರ ಕೋಲಾರದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯ ಹೆಚ್ಚಿನ ಲಾಭ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ದೊರೆಯಬೇಕೆಂಬುದು ಎಲ್ಲರ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಮಳೆಯಾಶ್ರಿತ ಪ್ರದೇಶಗಳಾದ ಈ ಜಿಲ್ಲೆಗಳಿಗೆ ಯೋಜನೆಯಲ್ಲಿ ಮೊದಲ ಆದ್ಯತೆ ನೀಡಬೇಕೆಂಬು ಒತ್ತಾಯಗಳು ಕೇಳಿ ಬಂದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಈ ಬೇಡಿಕೆಯನ್ನು ಸಕಾರಾತ್ಮಕವಾಗಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ ಎಂದರು.

ಬುಧವಾರ ನಂದಿ ಬೆಟ್ಟದಲ್ಲಿ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕೋಲಾರ ಜಿಲ್ಲೆಗೆ ಹೆಚ್ಚಿನ ಯೋಜನೆಗಳು ದೊರೆಯುವ ನಿರೀಕ್ಷೆಗಳಿವೆ. ಹೊಸ ಕೃಷಿ ಉತ್ಪನ್ನ ಮಾರುಕಟ್ಟೆ, ನರಸಾಪುರದಲ್ಲಿ ನೂತನ ಪೊಲೀಸ್ ಠಾಣೆ, ಅಂತರಗಂಗೆ ಬೆಟ್ಟದಿಂದ ಕೋಲಾರಮ್ಮ ಕೆರೆವರೆಗೆ ಅಭಿವೃದ್ಧಿಗಾಗಿ 100 ಕೋಟಿ ರೂಪಾಯಿ ಯೋಜನೆ, ವಿವಿಧ ರಸ್ತೆಗಳ ಅಭಿವೃದ್ದಿ, ವರ್ತುಲ ರಸ್ತೆಗಳ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳು ಸೇರಿರಲಿವೆ ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಅಧಿಕಾರಿಗಳಿಗೆ ತರಾಟೆ: ಪ್ರಗತಿಪರಿಶೀಲನಾ ಸಭೆಗೆ ಅಪೂರ್ಣ ಮತ್ತು ಅಸಂಬದ್ಧ ಮಾಹಿತಿಗಳನ್ನು ನೀಡಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಜಾರಿಯಲ್ಲಿರುವ ಎಲ್ಲಾ ಯೋಜನೆಗಳ ಕಾಮಗಾರಿಗಳು ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಬೇಕೆಂದು ತಾಕೀತು ಮಾಡಿದರು.

ಜನಪ್ರತಿನಿಧಿಗಳ ಗಮನಕ್ಕೆ ತಾರದೇ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದು ಫಲಾನುಭವಿಗಳನ್ನು ಅಧಿಕಾರಿಗಳೇ ಆಯ್ಕೆ ಮಾಡುತ್ತಿರುವ ಬಗ್ಗೆ ಸಭೆಯಲ್ಲಿ ಶಾಸಕರು ಪ್ರಸ್ತಾಪಿಸಿದಾಗ ಆಕ್ರೋಶಗೊಂಡ ಸಚಿವರು, ಇನ್ನು ಮುಂದೆ ಕಡ್ಡಾಯವಾಗಿ ಸರ್ಕಾರದ ಯಾವುದೇ ಸೌಲಭ್ಯಗಳು ಮತ್ತು ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ಸ್ಥಳೀಯ ಜನಪ್ರತಿನಿಧಿಗಳಿಗೆ ನೀಡಬೇಕು. ಅವರು ನೀಡುವ ಸಲಹೆ ಸೂಚನೆಗಳನ್ನು ಪಾಲಿಸಬೇಕು ಎಂದು ನಿರ್ದೇಶನ ನೀಡಿದರು.

ರೈತರಿಗೆ ಅನ್ಯಾಯ ಬೇಡ: ಮಾವು ಬೆಳೆಗಾರರ ಸಮಸ್ಯೆಯನ್ನು ಆಲಿಸಿದ ಒಂದೇ ವಾರದಲ್ಲಿ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿ ಪ್ರತಿ ಕೆಜಿಗೆ ಮಾವಿಗೆ 4 ರೂಪಾಯಿಗಳ ಬೆಂಬಲ ಬೆಲೆಯನ್ನು ನೀಡುವಂತೆ ಮಾಡಿದ್ದೇನೆ. ಇದು ನಮ್ಮ ರಾಜ್ಯ ಸರ್ಕಾರದ ರೈತಪರ ನಿರ್ಧಾರಕ್ಕೆ ಕೈಗನ್ನಡಿಯಾಗಿದೆ ಎಂದರು.

ವ್ಯಾಪಾರಿಗಳ ವಂಚನೆಗೆ ಕಡಿವಾಣ ಇರಲಿ: ಇನ್ನು ಸರ್ಕಾರ ಪ್ರತಿ ಕೆಜಿ ಮಾವಿಗೆ 4 ರೂಪಾಯಿ ಬೆಂಬಲ ಬೆಲೆ ನೀಡುತ್ತಿರುವ ಈ ಸಂದರ್ಭದಲ್ಲಿ ಕೆಲವು ವ್ಯಾಪಾರಿಗಳು ಕೇವಲ 2 ರೂಪಾಯಿ ಹೆಚ್ಚು ನೀಡಿ ಮಾವು ಬೆಳೆಗಾರರನ್ನು ವಂಚಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇಂತಹ ವ್ಯಾಪಾರಿಗಳ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಬೇಕು ಮತ್ತು ಅವರು ರೈತರಿಂದ ಖರೀದಿಸುವ ಮಾವಿಗೆ ದರ ನಿಗದಿ ಮಾಡುವಂತಹ ಕಾನೂನನ್ನು ಅನುಷ್ಠಾನಕ್ಕೆ ತರಬೇಕೆಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಾಲ್ಯ ವಿವಾಹದ ನೆಪದಲ್ಲಿ ಕಿರುಕುಳ ಬೇಡ: ಇನ್ನು ಹೆಣ್ಣು ಮಕ್ಕಳ ಮದುವೆ ವಿಚಾರದಲ್ಲಿ ಅಲ್ಲಲಿ ಬಾಲ್ಯ ವಿವಾಹ ಪ್ರಕರಣಗಳು ಮತ್ತು ಅದಕ್ಕೆ ಸಂಬಂಧಿಸಿದಂತೆ ಕೆಲವು ಅಮಾಯಕರನ್ನು ಜೈಲಿಗೆ ಕಳುಹಿಸುವಂತಹ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿವೆ. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹಕ್ಕೆ ಅವಕಾಶ ನೀಡಬಾರದು ಮತ್ತು ಇಂತಹ ಪ್ರಕರಣಗಳಲ್ಲಿ ಹೆಣ್ಣು ಮಕ್ಕಳ ನಿಖರವಾದ ಜನ್ಮ ದಿನಾಂಕವನ್ನು ಪರಿಶೀಲಿಸಬೇಕು ಮತ್ತು ಗಂಡಿನ ಮನೆಯವರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಬೇಕೆಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಹೊಸ ಜಲ್ಲಿ ಗಣಿಗಾರಿಕೆಗೆ ಅನುಮತಿ ಇಲ್ಲ: ಜಿಲ್ಲೆಯಲ್ಲಿ ಒಟ್ಟು 43 ಜಲ್ಲಿ ಕ್ರಷರ್‌ಗಳಿದ್ದು, ಈ ಪೈಕಿ ಮಾಲೂರು ತಾಲೂಕು ಒಂದರಲ್ಲೇ 27 ಕ್ರಷರ್ ಗಳು ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಇಲ್ಲಿ ಪರಿಸರಕ್ಕೆ ಧಕ್ಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಯಾವುದೇ ಹೊಸ ಕ್ರಷರ್ ಸ್ಥಾಪನೆಗೆ ಅನುಮತಿ ನೀಡಬಾರದು ಎಂದು ಸಚಿವ ಸುರೇಶ ಅವರು ಆದೇಶ ನೀಡಿದರು.

ಗೂಂಡಾ ಕಾಯ್ದೆ: ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟ ಮಾಡುವವರ ವಿರುದ್ಧ ಗೂಂಡಾ ಕಾಯ್ದೆ ಹಾಕಿ ಜೈಲಿಗೆ ಕಳುಹಿಸಬೇಕು. ರೌಡಿಸಂ ಮತ್ತು ಇನ್ನಿತರ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯಕ್ಕೆ ಮಾದರಿ ನರ್ಸರಿ ಕಾಯ್ದೆ: ಕಳಪೆ ಬಿತ್ತನೆ ಬೀಜ ಮಾರಾಟ ಮಾಡಿ ರೈತರು ಕಂಗಾಲಾಗುವಂತೆ ಮಾಡುತ್ತಿರುವವರ ವಿರುದ್ದ ಬಿಗಿ ಕಾನೂನು ತರುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಕೋಲಾರ ಜಿಲ್ಲಾಡಳಿತ ನರ್ಸರಿ ಕಾನೂನನ್ನು ಜಾರಿಗೆ ತರುತ್ತಿದೆ. ಇಂತಹವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಜೈಲಿಗೆ ಕಳುಹಿಸಲು ಅವಕಾಶವಿದ್ದು, ಇದು ಇಡೀ ರಾಜ್ಯಕ್ಕೆ ಅನ್ವಯವಾಗುವಂತಹ ಕಾಯ್ದೆಯಾಗಿದೆ ಎಂದು ತಿಳಿಸಿದರು.

15 ದಿನಗಳ ಗಡುವು : ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದರೂ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಮುಂದಿನ 15 ದಿನಗಳ ಒಳಗೆ ಕಾಮಗಾರಿ ನಡೆಸದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಹೊಸ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕೆಂದು ಗಡುವು ವಿಧಿಸಿದರು.

ಶಿಷ್ಟಾಚಾರ ಪಾಲಿಸಿ: ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಬಗ್ಗೆ ತಮಗೆ ಆಹ್ವಾನ ನೀಡಿಲ್ಲ, ಅಧಿಕಾರಿಗಳು ತಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಕೆಲ ಶಾಸಕರು ದೂರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸುರೇಶ ಅವರು, ಇನ್ನು ಮುಂದೆ ಕಡ್ಡಾಯವಾಗಿ ಜಿಲ್ಲೆಗೆ ಸಂಬಂಧಿಸಿದ ಶಾಸಕರು, ವಿಧಾನಪರಿಷತ್ತು ಸದಸ್ಯರು ಮತ್ತು ಸಂಸದರನ್ನು ಖುದ್ದಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೇ ಆಹ್ವಾನಿಸಬೇಕು ಎಂದು ಕಟ್ಟಪ್ಪಣೆ ಮಾಡಿದರು.

Tags:
error: Content is protected !!