ಬೆಂಗಳೂರು: ಕಳೆದ 94 ವರ್ಷಗಳ ನಂತರ ರಾಜ್ಯ ಸರ್ಕಾರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ಜೊತೆಯಲ್ಲಿ ಜಾತಿಗಣತಿಯನ್ನು ನಡೆಸುತ್ತಿದ್ದು, ಒಕ್ಕಲಿಗ ಜನಾಂಗದವರು ಸಮೀಕ್ಷೆ ಸಂದರ್ಭದಲ್ಲಿ ಜಾತಿ, ಉಪಜಾತಿ ಹಾಗೂ ಸಮನಾಂತರ ಜಾತಿ ಕಾಲಂಗಳಲ್ಲಿ ಒಕ್ಕಲಿಗ ಎಂದೇ ಬರೆಸುವಂತೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಕರೆ ನೀಡಿದ್ದಾರೆ.
ಈ ಸಂಬಂಧ ಸಂದೇಶ ನೀಡಿರುವ ಅವರು, ಸೆಪ್ಟೆಂಬರ್.22ರಿಂದ ಸಮೀಕ್ಷೆ ನಡೆಸಲಾಗುತ್ತಿದ್ದು, ಪ್ರತಿ ಜನಾಂಗದವರಿಗೂ ಈ ಸಮೀಕ್ಷೆ ನಮ್ಮ ನಮ್ಮ ಮಕ್ಕಳ ಮತ್ತು ಜನಾಂಗದ ಭವಿಷ್ಯದ ದೃಷ್ಟಿಯಿಂದ ಬಹು ಮುಖ್ಯವಾಗಿದೆ ಎಂದಿದ್ದಾರೆ.
60 ವಿವಿಧ ವಿಷಯಗಳೊಂದಿಗೆ ಗಣತಿದಾರರು ಮನೆಗಳಿಗೆ ಬಂದಾಗ ತಪ್ಪದೇ ಇದ್ದು, ಮಾಹಿತಿಯನ್ನು ನಿಖರವಾಗಿ, ವಸ್ತುನಿಷ್ಠವಾಗಿ, ವಿಚಾರಬದ್ಧವಾಗಿ ನೀಡಿ. ಧರ್ಮದ ಕಾಲಂ 8ರಲ್ಲಿ ಹಿಂದೂ ಎಂದೂ, ಜಾತಿ ಕಾಲಂ 9ರಲ್ಲಿ ಒಕ್ಕಲಿಗ ಎಂದೂ, ಕಾಲಂ 10ರಲ್ಲಿ ಉಪಜಾತಿಯನ್ನು ಒಕ್ಕಲಿಗ ಎಂದೇ ಬರೆಸಿ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:-ಮೈಸೂರು ದಸರಾ: ನಾಳೆ ಕಾಡಿನತ್ತ ದಸರಾ ಗಜಪಡೆ
ಒಕ್ಕಲಿಗ ಜನಾಂಗವನ್ನು ವ್ಯವಹಾರಿಕ ಭಾಷೆಯಲ್ಲಿ ಗೌಡ, ಗೌಡ ಎಂದು ಹೇಳುತ್ತೇವೆ. ಆದರೆ, ಸಮೀಕ್ಷೆ ಸಂದರ್ಭದಲ್ಲಿ ಎಲ್ಲಿಯೂ ಗೌಡ ಎಂಬುದನ್ನು ನಮೂದಿಸಬೇಡಿ, ಬರೆಸಬೇಡಿ. ನಮ ಉಪಜಾತಿಗಳು ಕುಟುಂಬದ ಸಾಂಸ್ಕೃತಿಕ ಆಚರಣೆಗೆ ಸೀಮಿತವಾಗಿರಬೇಕೇ ಹೊರತು, ದಾಖಲೆಯಲ್ಲಿ ಅಲ್ಲ. ನಾವೆಲ್ಲ ಒಂದೇ ಜಾತಿ ಅದು ಒಕ್ಕಲಿಗ ಕೋಡ್ ನಂಬರ್ 1541 ಎಂದು ಶ್ರೀಗಳು ಹೇಳಿದ್ದಾರೆ.
ಒಂದು ವೇಳೆ ಗಣತಿದಾರರು ಮನೆಗೆ ಬಂದಾಗ ನಾವು ಮನೆಯಲ್ಲಿ ಇಲ್ಲದಿದ್ದರೆ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ವೆಬ್‍ಸೈಟ್‍ನಲ್ಲಿ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಿ ಅಪ್‍ಲೋಡ್ ಮಾಡಬಹುದು. ಈ ಸಂದರ್ಭದಲ್ಲಿ ಏನೇ ಕೆಲಸವಿದ್ದರೂ 94 ವರ್ಷಗಳ ನಂತರ ನಡೆಯುವ ಸಮೀಕ್ಷೆಯಲ್ಲಿ ತಪ್ಪದೇ ಭಾಗವಹಿಸಿ ಸಹಕರಿಸಬೇಕು ಎಂದು ಸ್ವಾಮೀಜಿ ಅವರು ಕರೆ ನೀಡಿದ್ದಾರೆ.





