ವಿಜಯಪುರ: ಕೆಲಸಕ್ಕೆ ಬರುವುದಿಲ್ಲ ಎಂದ ಕಾರ್ಮಿಕರಿಗೆ ಮಾಲೀಕ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರದ ಗಾಂಧಿನಗರ ಏರಿಯಾದಲ್ಲಿರುವ ಇಟ್ಟಂಗಿ ಭಟ್ಟಿಯಲ್ಲಿ ಈ ಘಟನೆ ನಡೆದಿದ್ದು, ಮಾಲೀಕ ಖೇಮು ಟಾಠೋಡ ಹಾಗೂ ಸಂಬಂಧಿಕರು ಮನ ಬಂದಂತೆ ಹಲ್ಲೆ ನಡೆಸಿದ್ದಾರೆ.
ಸದಾಶಿವ ಮಾದರ, ಸದಾಶಿವ ಬಬಲಾದಿ, ಉಮೇಶ ಮಾದರ ಎಂಬುವವರ ಮೇಲೆ ಹಲ್ಲೆ ನಡೆದಿದ್ದು, ಕಾರ್ಮಿಕರು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಸಂಕ್ರಮಣದಂದು ಮನೆಗೆ ತೆರಳಿದ್ದ ಕಾರ್ಮಿಕರು ಮರಳಿ 16ರಂದು ಇಟ್ಟಿಗೆ ಭಟ್ಟಿಗೆ ಬಂದಿದ್ದರು. ಬಳಿಕ ಕಾರ್ಮಿಕರೆಲ್ಲರೂ ತಮ್ಮ ಸಾಮಾನುಗಳನ್ನು ಕೊಂಡೊಯ್ಯಲು ಮುಂದಾಗುತ್ತಿದ್ದರು ಎನ್ನಲಾಗಿದೆ.
ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಮಾಲೀಕ ಬೇರೆ ಕಡೆ ಕೆಲಸಕ್ಕೆ ಹೋಗುತ್ತಿರುವುದು ಯಾಕೆ ಎಂದು ಪ್ರಶ್ನಿಸಿ ಹಿಗ್ಗಾಮುಗ್ಗಾ ಹಲ್ಲೆ ಮಾಡಿಸಿದ್ದಾನೆ.
ಸದ್ಯ ಈ ಘಟನೆಯಿಂದ ಮಾಲೀಕನ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಮಾಲೀಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.