ಬಹುತ್ವದ ಪರವಾಗಿ ಇರುವವರನ್ನು ನಾವು ಸದಾ ಸ್ಮರಿಸುತ್ತಿರಬೇಕು: ಸಿಎಂ ಸಿದ್ದರಾಮಯ್ಯ

ವಿಜಯಪುರ: ಮಾಧವಾನಂದ ಸ್ವಾಮಿಗಳು ಬಹುತ್ವದ ಪರವಾಗಿದ್ದರು. ಹೀಗಾಗಿ ಅವರನ್ನು ನಾವೆಲ್ಲರೂ ಸ್ಮರಿಸಬೇಕು. ಅಂತರ್ಜಾತಿ, ಅಂತರ್ ಧರ್ಮೀಯ ಮದುವೆಗಳಿಂದ ಜಾತಿ ವ್ಯವಸ್ಥೆ ಅಳಿಸಲು ಸಾಧ್ಯ, ಇದನ್ನು ಮಾಧವಾನಂದ ಸ್ವಾಮಿಗಳು 20ನೇ ಶತಮಾನದಲ್ಲಿ ಸಾರಿ ಹೇಳಿದ್ದರು ಎಂದು ಸಿಎಂ ಸಿದ್ದರಾಮಯ್ಯ ನುಡಿದರು.

ಅವರು ಇಂದು (ಜೂ.16) ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಇಂಚಗೇರಿ ಮಠದಲ್ಲಿ ನೂತನವಾಗಿ ನಿರ್ಮಿಸಿದ ಮಾಧವಾನಂದ ಪ್ರಭುಗಳ ದೇವಸ್ಥಾನವನ್ನು ಲೋಕಾರ್ಪಣೆಗೊಳಿಸಿ, ಬಳಿಕ ಕಳಸಾರೋಹಣದಲ್ಲಿ ಪಾಲ್ಗೊಂಡು ಮಾತನಾಡಿದರು.

ಜಾತಿ ವ್ಯವಸ್ಥೆ ಕಾರಣಕ್ಕೆ ಭಾರತದ ಶೂದ್ರರು ಕೇವಲ ಉತ್ಪಾದನೆ ಮಾಡಬೇಕಿತ್ತು. ಆದರೆ ತಾವು ಉತ್ಪಾದಿಸಿದ್ದನ್ನು ಅನುಭವಿಸುವ ಹಕ್ಕು ಮತ್ತು ಸ್ವಾತಂತ್ರ್ಯ ಇರಲಿಲ್ಲ. ಈ ಅಸಮಾನತೆ ವಿರುದ್ಧ ಶ್ರೀ ಮಾಧವಾನಂದ ಸ್ವಾಮೀಜಿಯವರು ಧ್ವನಿ ಎತ್ತಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡು ಜನರ ಮುಕ್ತಿಗಾಗಿ ಶ್ರಮಿಸಿದರು ಎಂದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಸವಾದಿ ಶರಣರು 12ನೇ ಶತಮಾನದಲ್ಲಿ ಹೇಳಿದ್ದನ್ನು ಮಾಧವಾನಂದ ಪ್ರಭುಗಳು 20ನೇ ಶತಮಾನದಲ್ಲಿ ಸಾರಿದರು. ಪಾಳೇಗಾರಿಕೆಯು ಸಮಾಜಕ್ಕೆ, ಜನರ ಸ್ವಾತಂತ್ರ್ಯಕ್ಕೆ ಕಂಟಕ. ಹೀಗಾಗಿ ಬಲಾಢ್ಯರ ಕೈಯಲ್ಲಿ ಅಧಿಕಾರ ಇರಬಾರದು ಎಂದು ಮಹಾತ್ಮಗಾಂಧಿಯವರು ಹೇಳಿದ್ದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸ್ವಾತಂತ್ರ ಸೇನಾನಿಗಳಾದ ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಭಾರತದೊಳಗಿದ್ದ ವರ್ಣ ವ್ಯವಸ್ಥೆ ಮತ್ತು ಜಾತಿ ವ್ಯವಸ್ಥೆ ಹಾಗೂ ಭಾರತದಲ್ಲಿನ 560 ಸಂಸ್ಥಾನಗಳಲ್ಲಿ ಇದ್ದ ಒಳ ಮುನಿಸನ್ನು ಬ್ರಿಟೀಷರು ಬಳಸಿಕೊಂಡು ಭಾರತವನ್ನು ಆಳಿದರು ಎಂದು ವಿವರಿಸಿದರು.