ಬೆಂಗಳೂರು: ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸಂವಿಧಾನಬದ್ಧವಾಗಿ ನ್ಯಾಯ ಕೊಡಿಸುವ ವಿಷಯದಲ್ಲಿ ಕಾಂಗ್ರೆಸ್ ಪಕ್ಷಕ್ಕಿಂತಲು ಬಿಜೆಪಿ ಯಾವಾಗಲೂ ಒಂದು ಹೆಜ್ಜೆ ಮುಂದೆ ಇರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿಲ್ಲ. ಇದು ವೈಜ್ಞಾನಿಕವಾಗಿ ನಡೆಯಲಿ ಎಂಬುದಷ್ಟೇ ನಮ್ಮ ಮನವಿ ಎಂದು ಸ್ಪಷ್ಟಪಡಿಸಿದರು.
ಗೊಂದಲಗಳನ್ನು ಸರಿಪಡಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರೆ ಬಿಜೆಪಿ ಹಿಂದುಳಿದ ವರ್ಗಗಳ ವಿರೋಧಿ, ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಯನ್ನು ವಿರೋಧಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ. ಇವರಿಂದ ನಾವು ಸಾಮಾಜಿಕ ನ್ಯಾಯದ ಪಾಠ ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದರು.
ಇದನ್ನು ಓದಿ : ಆರ್ಥಿಕ, ಸಾಮಾಜಿಕ ಸಮೀಕ್ಷೆ ವಿಚಾರದಲ್ಲಿ ಸರ್ಕಾರಕ್ಕೆ ಯಾಕಿಷ್ಟು ಆತುರ?: ವಿಜಯೇಂದ್ರ ಪ್ರಶ್ನೆ
ಸಮೀಕ್ಷೆಯಲ್ಲಿ ಸಾಕಷ್ಟು ಗೊಂದಲಗಳು ಹೆಚ್ಚುತ್ತಿದೆ. ಅನೇಕ ಕಡೆ ತಾಂತ್ರಿಕ ಸಮಸ್ಯೆ, ಗಣತಿದಾರರ ಮೇಲೆ ಹಲ್ಲೆ, ನಾಯಿ ಕಡಿತ, ಮಾಹಿತಿ ಕೊಡದಿರುವುದು ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗಿವೆ. ಇದನ್ನು ಸರಿಪಡಿಸಿ ಎಂದು ಹೇಳುವುದು ಅನ್ಯಾಯವೇ ಎಂದು ಪ್ರಶ್ನೆ ಮಾಡಿದರು.
ಆಯೋಗ ಯಾರದೋ ಒತ್ತಡಕ್ಕೆ ಮಣಿದು ಕೆಲಸ ಮಾಡಬಾರದು. ಸ್ವತಂತ್ರವಾಗಿ ಕೆಲಸ ಮಾಡಿದರೆ ಇಂತಹ ಅವಘಡಗಳು ಸಂಬಂಧಿಸುವುದಿಲ್ಲ. ಪ್ರಮಾದವನ್ನು ಸರಿಪಡಿಸಿ ಎಂದು ಹೇಳಿದರೆ ನಮ್ಮ ಮೇಲೆ ಗೂಬೆ ಕೂರಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮೀಕ್ಷೆ ವೇಳೆ ಗಣತಿದಾರರು ಸಾರ್ವಜನಿಕರಿಗೆ 60 ಪ್ರಶ್ನೆಗಳನ್ನು ಕೇಳುತ್ತಿರುವುದರ ಬಗ್ಗೆ ಸ್ವತಃ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ವಿರೋಧ ವ್ಯಕ್ತಪಡಿಸಿದ್ದಾರೆ. ನಾವು ಮಾತನಾಡಿದರೆ ಹಿಂದುಳಿದ ವರ್ಗಗಳ ವಿರೋಧಿ. ಹಾಗಾದರೆ ಡಿಸಿಎಂ ಮಾತನಾಡಿರುವುದಕ್ಕೆ ಸಿಎಂ ಏನು ಹೇಳುತ್ತಾರೆ ಎಂದು ಪ್ರಶ್ನೆ ಮಾಡಿದರು.





