Mysore
20
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಕರ್ನಾಟಕದ ಸ್ವಸಹಾಯ ಗುಂಪು, ಸಣ್ಣ ಉದ್ಯಮಕ್ಕೆ ಸಿಗಲಿದೆ ವಾಲ್‌ಮಾರ್ಟ್‌ ಬಲ

ಬೆಂಗಳೂರು: ಕರ್ನಾಟಕದಾದ್ಯಂತ ಮಹಿಳಾ ನೇತೃತ್ವದ ಸ್ವಸಹಾಯ ಗುಂಪುಗಳಿಗೆ (SHGs) ಈಗ ಜಾಗತಿಕ ಮಾರುಕಟ್ಟೆಯಲ್ಲಿಯೂ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುವ ಮತ್ತು ಮಾರಾಟ ಮಾಡುವ ಅವಕಾಶ ದೊರೆತಿದೆ.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಡಿಯಲ್ಲಿ ರಾಷ್ಟ್ರೀಯ ಜೀವನೋಪಾಯ ಮಿಷನ್ (NLM) ಈಗ ಸ್ವಸಾಹಯ ಗುಂಪುಗಳ ಡಿಜಿಟಲ್ ಸಾಮರ್ಥ್ಯ ಹೆಚ್ಚಿಸಲು ಅಂತರಾಷ್ಟ್ರೀಯ ಖ್ಯಾತಿಯ “ವಾಲ್‌ಮಾರ್ಟ್‌” ಜೊತೆ ಒಪ್ಪಂದ ಮಾಡಿಕೊಂಡಿದೆ.

ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್.ಪಾಟೀಲ್ ಮತ್ತು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಮಂಗಳವಾರ “ವಾಲ್‌ಮಾರ್ಟ್‌ ವೃದ್ಧಿ” ಒಪ್ಪಂದಕ್ಕೆ ಸಹಿ ಹಾಕಿದರು.

ಎನ್‌ಎಲ್‌ಎಂ ನಿರ್ದೇಶಕಿ ಆರ್. ಸ್ನೇಹಲ್ ಮತ್ತು ಐ2ಐ ಫೌಂಡೇಶನ್‌ನ ಟ್ರಸ್ಟಿ ಪಾರುಲ್ ಸೋನಿ ಸಹಿ ಹಾಕಿದರು.

ಈ ಒಪ್ಪಂದದ ಅವಧಿ ಮೂರು ವರ್ಷಗಳಾಗಿರುತ್ತದೆ. ವಾಲ್ಮಾರ್ಟ್ ವೃದ್ಧಿಯ ಅನುಷ್ಠಾನ ಪಾಲುದಾರರಾದ “ಐಡಿಯಾಸ್ ಟು ಇಂಪ್ಯಾಕ್ಟ್” ಫೌಂಡೇಶನ್ ಮೂಲಕ ಸ್ವಸಹಾಯ ಗುಂಪುಗಳಿಗೆ ಉಚಿತ ಡಿಜಿಟಲ್ ಕಲಿಕೆ ತರಬೇತಿ, ವ್ಯಾಪಾರ ಪರಿಕರ ಮತ್ತು ಮಾರ್ಗದರ್ಶನ ದೊರೆಯಲಿದೆ.

ಇದನ್ನು ಓದಿ: ಭಾರತದೊಂದಿಗೆ ವ್ಯಾಪಾರ ಒಪ್ಪಂದ: ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸುಳಿವು

ಫ್ಲಿಪ್‌ಕಾರ್ಟ್ ಮತ್ತು ವಾಲ್‌ಮಾರ್ಟ್‌ ಸಂಸ್ಥೆಯ ಮಾರುಕಟ್ಟೆ ಜೊತೆ ಇ-ಕಾಮರ್ಸ್ ಸಂಪರ್ಕವನ್ನು ಸಾಧಿಸಲು ಈ ಒಪ್ಪಂದ ಅವಕಾಶ ಕಲ್ಪಿಸುತ್ತಿದೆ. ಸ್ವಸಹಾಯ ಗುಂಪುಗಳಿಗೆ ಡಿಜಿಟಲ್ ವ್ಯವಸ್ಥೆ, ಇ-ಕಾಮರ್ಸ್ ಮತ್ತು ಮಾರ್ಕೆಟಿಂಗ್ ಮತ್ತು ಇತರ ಸಾಮರ್ಥ್ಯಗಳಲ್ಲಿ ವಿಶೇಷ ತರಬೇತಿ ದೊರೆಯಲಿದೆ.

ಈ ಒಪ್ಪಂದದಿಂದ ಸ್ವಸಹಾಯ ಗುಂಪುಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೊಸ ಮಾರುಕಟ್ಟೆಗಳಿಗೆ ಅವಕಾಶ ದೊರೆಯಲಿದೆ. ಸಾವಿರಾರು ಮಹಿಳೆಯರಿಗೆ ಉತ್ತಮ ಆದಾಯ ದೊರೆಯಲಿದೆ. ಈ ಹಿಂದೆ, ಸ್ವಸಹಾಯ ಗುಂಪುಗಳಿಗೆ ಡಿಜಿಟಲ್ ಮಾರ್ಕೆಟಿಂಗ್ ಕೊರತೆಯಿತ್ತು. ವಾಲ್ಮಾರ್ಟ್ ವೃದ್ಧಿಯ ಬೆಂಬಲದೊಂದಿಗೆ, ಅವರ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿಯೂ ಪ್ರದರ್ಶಿಸಬಹುದು ಎಂದು ಡಾ. ಶರಣಪ್ರಕಾಶ್‌ ಪಾಟೀಲ್‌ ತಿಳಿಸಿದರು.

ಡಾ. ಶಾಲಿನಿ ರಜನೀಶ್‌ ಮಾತನಾಡಿ, ಈ ಒಪ್ಪಂದವು ನಮ್ಮ ಕರ್ನಾಟಕದ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಹೆಚ್ಚು ನೆರವಾಗಲಿದೆ. ಇಲ್ಲಿಯವರೆಗೆ, ಅವರ ಉತ್ಪನ್ನಗಳನ್ನು ಇಲಾಖಾ ಕಾರ್ಯಕ್ರಮಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿತ್ತು. ಈಗ ಇದರ ವಿಸ್ತಾರ ಹೆಚ್ಚಾಗಿದೆ. ವರ್ಷವಿಡೀ ಮಾರಾಟಕ್ಕೆ ಅವಕಾಶ ದೊರೆಯುತ್ತದೆ ಎಂದರು.

ವಾಲ್ಮಾರ್ಟ್‌ನ ಹಿರಿಯ ಉಪಾಧ್ಯಕ್ಷ ಜೇಸನ್ ಫ್ರೆಮ್‌ಸ್ಟಾಡ್ ಮಾತನಾಡಿ, ಸ್ವಸಹಾಯ ಗುಂಪುಗಳ ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಲು ಅವಕಾಶ ದೊರೆಯಲಿದೆ ಎಂದರು.

Tags:
error: Content is protected !!