ಬೆಂಗಳೂರು: ದೇವನಹಳ್ಳಿ ರೈತರ ಹೋರಾಟಕ್ಕೆ ಅತಿದೊಡ್ಡ ಜಯ ಸಿಕ್ಕಿದ್ದು, ಭೂಸ್ವಾಧೀನ ಕೈಬಿಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.
ವಿಧಾನಸೌಧದಲ್ಲಿ ರೈತರ ಜೊತೆ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಈ ಘೋಷಣೆ ಮಾಡಿದ್ದಾರೆ. ಈ ಮೂಲಕ ಕೊನೆಗೂ ರೈತರ ಹೋರಾಟಕ್ಕೆ ಜಯ ಸಿಕ್ಕಿದ್ದು, ರಾಜ್ಯ ಸರ್ಕಾರ ರೈತರ ಹೋರಾಟಕ್ಕೆ ಮಣಿದಿದೆ.
ಭೂಮಾಲೀಕರು ಸ್ವಯಂಪ್ರೇರಿತವಾಗಿ ಜಮೀನು ನೀಡಲು ಮುಂದಾದರೆ ಮಾತ್ರ ಅವರಿಂದ ಖರೀದಿಸಿ, ಬಲವಂತವಾಗಿ ಜಮೀನು ಪಡೆದುಕೊಳ್ಳಬೇಡಿ ಎಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ರೈತರು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಾ ಬಂದಿದ್ದರು. ದೇವನಹಳ್ಳಿಯಲ್ಲಿ ರೈತರ ಭೂಮಿ ಸ್ವಾಧೀನ ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದ್ದರು. ಇತ್ತೀಚೆಗೆ ರೈತರು ತಾವೇ ಬೆಳೆದ ತರಕಾರಿ, ಹೂವು, ಹಣ್ಣುಗಳ ಬುಟ್ಟಿ ಸಮೇತ ವಿಧಾನಸೌಧಕ್ಕೆ ಆಗಮಿಸಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರೈತರ ಜಮೀನು ಸ್ವಾಧೀನ ಪಡಿಸಿಕೊಳ್ಳದಂತೆ ಮನವಿ ಮಾಡಿದ್ದರು.
ಈಗ ಸಿಎಂ ಸಿದ್ದರಾಮಯ್ಯ ಅವರು ರೈತರ ಮನವಿಗೆ ಸ್ಪಂದಿಸಿದ್ದು, ಭೂಸ್ವಾಧೀನ ಕೈಬಿಡಲು ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಪರ ರೈತರು ಜೈಕಾರ ಹಾಕಿದ್ದಾರೆ.





