Mysore
18
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ವೀರಶೈವ-ಲಿಂಗಾಯತ ಬೇರೆ ಅಲ್ಲ : ಸಚಿವ ಖಂಡ್ರೆ

eshwar khandre

ಬೆಂಗಳೂರು : ವೀರಶೈವ-ಲಿಂಗಾಯತ ಬೇರೆ ಬೇರೆ ಅಲ್ಲ ಒಂದೆ ಎಂಬುದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಿಲುವಾಗಿದ್ದು, ಪ್ರತ್ಯೇಕ ಧರ್ಮಕ್ಕಾಗಿ ಪ್ರಯತ್ನ ಮುಂದುವರಿಯಲಿದೆ ಎಂದು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಪುನರುಚ್ಚರಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದಗಾಂಗಾ ಮಹಾಸಂಸ್ಥಾನದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರೂ ವೀರಶೈವ-ಲಿಂಗಾಯತ ಒಂದೇ ಎಂದು ಪ್ರತಿಪಾದಿಸಿದ್ದರು ಎಂದು ತಿಳಿಸಿದರು.

ಹುಬ್ಬಳ್ಳಿಯಲ್ಲಿ ಮಠಾಧಿಪತಿಗಳ ಒಕ್ಕೂಟ ಆಯೋಜಿಸಿದ್ದ ಏಕತಾ ಸಮಾವೇಶ ಸಂಪೂರ್ಣ ಯಶಸ್ವಿಯಾಗಿದೆ. ಪೂಜ್ಯ ದಿಂಗಾಲೇಶ್ವರ ಮಹಾಸ್ವಾಮೀಜಿ, ಶ್ರೀ ಸಿದ್ದಲಿಂಗ ಸ್ವಾಮೀಜಿ, ಪಂಚಪೀಠದ ಪೀಠಾಧಿಪತಿಗಳು, ಸಾವಿರಾರು ಹರಚರಗುರು ಮೂರ್ತಿಗಳು ಹಾಗೂ ಸಾವಿರಾರು ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಈ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಖಂಡ್ರೆ ತಿಳಿಸಿದರು.

ಎಲ್ಲರಿಗೂ ತೃಪ್ತಿಯಾಗುವಂತೆ ಸಮೀಕ್ಷೆ
ಇದೇ 22ರಿಂದ ಆರಂಭವಾಗಲಿರುವ ಸಮೀಕ್ಷೆ ಪೂರ್ಣಗೊಂಡ ಬಳಿಕ, ಹಿಂದುಳಿದಿರುವಿಕೆಯ ಗುರುತಿಸುವಿಕೆ, ಅಂಕ ನೀಡಿಕೆಯಲ್ಲಿ ಯಾರಿಗೂ ಅನ್ಯಾಯ ಆಗದ ರೀತಿಯಲ್ಲಿ, ಎಲ್ಲರ ಅಭಿಪ್ರಾಯ ಪಡೆದೇ ಸರ್ಕಾರ ಮುಂದಡಿ ಇಡಲಿದೆ. ಇದನ್ನು ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ರಾಜ್ಯದ ಎಲ್ಲ 7 ಕೋಟಿ ಜನರಿಗೂ ತೃಪ್ತಿಯಾಗುವ ರೀತಿಯಲ್ಲಿ ಸಮೀಕ್ಷೆ ನಡೆಯಲಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಎಲ್ಲ ಜಾತಿ, ಜನಾಂಗದಲ್ಲೂ ಬಡವರಿದ್ದಾರೆ, ನಿರ್ಗತಿಕರಿದ್ದಾರೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಸರ್ಕಾರದ ಯೋಜನೆಯ ಲಾಭ ದೊರಕಬೇಕು. ಈ ನಿಟ್ಟಿನಲ್ಲಿ ಸರ್ಕಾರ ಶ್ರಮಿಸುತ್ತಿದೆ ಎಂದರು.
ಹಿಂದುಳಿದಿರುವಿಕೆಯನ್ನು ತಿಳಿಯಲು ಮತ್ತು ಅವರಿಗೆ ಸೂಕ್ತ ಸೌಲಭ್ಯ ಕಲ್ಪಿಸುವ ಉದ್ದೇಶದಿಂದಲೇ ಈ ಸಮೀಕ್ಷೆ ನಡೆಯುತ್ತಿದೆ. ಹೀಗಾಗಿ ಸಮಾಜದ ಪ್ರತಿಯೊಬ್ಬರೂ ಇದರಲ್ಲಿ ಭಾಗಿಯಾಗಬೇಕು ಮತ್ತು ವಾಸ್ತವ ಮಾಹಿತಿಯನ್ನು ದಾಖಲೀಕರಿಸಬೇಕು ಎಂದರು.

ಲಿಂಗಾಯತ-ವೀರಶೈವ ಧರ್ಮ ಎಂದು ಧರ್ಮದ ಕಾಲಂನಲ್ಲಿ ಬರೆಸಬೇಕು ಎಂಬುದು ಮಹಾಸಭಾ ನಿಲುವಾಗಿದೆ. ಆದರೆ ಪ್ರತ್ಯೇಕ ಧರ್ಮ ಎಂದು ಇನ್ನೂ ಗುರುತಿಸಿಲ್ಲ ಹೀಗಾಗಿ ಆತ್ಮಸಾಕ್ಷಿಯಂತೆ ಮತ್ತು ವಿವೇಚನೆಗೆ ತಕ್ಕಂತೆ ಬರೆಸುವಂತೆ ಮನವಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ವೀರಶೈವ ಲಿಂಗಾಯತ ಮಹಾಸಭಾ ವಿಸರ್ಜನೆ ಮಾಡಬೇಕು ಎಂದು ಅಸಂಬದ್ಧ ಹೇಳಿಕೆ ನೀಡಿರುವವರಿಗೆ ತಾವು ಉತ್ತರ ನೀಡುವುದಿಲ್ಲ. ಅವರಿಗೆ ಯಾವುದೇ ಅಸ್ತಿತ್ವ ಇಲ್ಲ ಎಂದು ಈಶ್ವರ ಖಂಡ್ರೆ ಪ್ರತಿಕ್ರಿಯಿಸಿದರು.

Tags:
error: Content is protected !!