ಮದ್ದೂರು: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ , ರಾಜಕಾರಣದಲ್ಲಿ ಪ್ರಾಮಾಣಿಕರಲ್ಲೇ ಅತ್ಯಂತ ಪ್ರಮಾಣಿಕರು ಎಂದು ಕೃಷಿ ಸಚಿವ ಎನ್.ಚಲುವರಾವಸ್ವಾಮಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.
ಸೋಮವಾರ ಮದ್ದೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಜನಾಂದೋಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಮ್ಮ ಭಾಷಣದುದ್ದಕ್ಕೂ ಬಿಜೆಪಿ-ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕುಮಾರಸ್ವಾಮಿ ಅವರು ಜಮೀನಿನಲ್ಲಿ ಆಲುಗೆಡ್ಡೆ ಬೆಳೆದುಕೊಂಡು ಬಂದಿದ್ದಾರೆ, ನಾವು ಏನು ಇಲ್ಲದೇ ಇರೋರು, ನಾವು ಪಂಚೆ ಬಿಟ್ಟು ಪ್ಯಾಂಟು ಹಾಕಿಕೊಂಡು ಬಿಟ್ಟಿದ್ದೀವಿ, ಇದು ಕುಮಾರಸ್ವಾಮಿಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಟೀಕಿಸಿದರು.
ಬಿಜೆಪಿ-ಜೆಡಿಎಸ್‌ಗೆ ನಾಡಿನ ಮಹಿಳೆಯರು, ರೈತರ ಹಾಗೂ ಬಡವರ ಕಷ್ಟ ಮುಖ್ಯ ಅಲ್ಲ. ಅವರಿಗೇ ಏನೋ ಆಸೆ ಕನಸು ಇತ್ತು. ಮೋದಿ ಕೃಪೆಯಿಂದ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆಂದು ಕನಸು ಕಂಡಿದ್ದರು. ಅದು ಆಗಲಿಲ್ಲ. ಜನ ಕಾಂಗ್ರೆಸ್ ಪಕ್ಷಕ್ಕೆ 136 ಸೀಟು ಕೊಟ್ಟು ಅಧಿಕಾರದಲ್ಲಿ ಕೂರಿಸಿದ್ದಾರೆ. ಅವರ ಕಷ್ಟ ಕರ್ಪಣ್ಯಗಳಿಗೆ ಆಗುವುದು ನಮ್ಮ ಧರ್ಮ. ನಾವು ವಾಗ್ದಾನದಂತೆ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ ಎಂದರು.
ಕರ್ನಾಟಕ ಕಾಂಗ್ರೆಸ್ ಭದ್ರಕೋಟೆ ಎನ್ನುವುದು ಮೈತ್ರಿ ನಾಯಕರಿಗೆ ತಿಳಿದಿದೆ, ಹೀಗಾಗಿ ಕಾಂಗ್ರೆಸ್ ವಿರುದ್ಧ ವಿತೂರಿ ನಡೆಸಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಪೆನ್‌ಡ್ರೈವ್ ಸೇರಿದಂತೆ ಅನೇಕ ವಿಷಯಗಳಲ್ಲಿ ಕಾಂಗ್ರೆಸ್ ಮೇಲೆ ಆರೋಪ ಹೊರಿಸಲು ನೋಡಿದ್ರು, ಆದರೆ ಅವುಗಳಲ್ಲಿ ಸಫಲ ಕಾಣದೆ ಇದೀಗ ಮುಡಾ ಹಗರಣದ ನೆಪದಲ್ಲಿ ಪಾದಯಾತ್ರೆ ಹೊರಟಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಕುಮಾರಸ್ವಾಮಿ ರಾಜ್ಯಕ್ಕೆ ಅನುದಾನ ತಂದು ತೋರಿಸಲಿ
ಕೊಡಗು, ಮಂಗಳೂರು, ಸಕಲೇಶಪುರ ಹಾಗೂ ಉತ್ತರಕನ್ನಡದಲ್ಲಿ ಆಗಿರುವ ಅತಿವೃಷ್ಠಿ ಬಗ್ಗೆ ಕೇಂದ್ರದ ಜೊತೆ ಮಾತನಾಡಿ ರಾಜ್ಯಕ್ಕೆ ಅನುದಾನ ತಂದು ಕೊಡುವುದರಲ್ಲಿ ನಿಮ್ಮ ಜಾಣತನ ತೋರಿಸಿ ಎಂದು ಎಚ್‌ಡಿ ಕುಮಾರಸ್ವಾಮಿಗೆ ಸಚಿವ ಚಲುವರಾಯಸ್ವಾಮಿ ಸವಾಲು ಹಾಕಿದರು.
ಹೆಚ್.ಡಿ ಕುಮಾರಸ್ವಾಮಿ ಅವರು ಪಾದಯಾತ್ರೆಯಲ್ಲಿ ಅನಿವಾರ್ಯವಾಗಿ ಭಾಗಿಯಾಗಿದ್ದಾರೆ. ಮೊದಲು ಭಾಗವಹಿಸುವುದಿಲ್ಲ ಎಂದ ಕುಮಾರಸ್ವಾಮಿ ನಂತರ ಬಲವಂತವಾಗಿ ಒಪ್ಪಿಕೊಂಡಿದ್ದಾರೆ. ಮುಡಾದಲ್ಲಿ 50;50 ಅನುಪಾತದಲ್ಲಿ 150 ಜನರಿಗೆ ಸೈಟ್ ಕೊಟ್ಟಿದ್ದಾರೆ, ಪಾರ್ವತಿ ಸಿದ್ದರಾಮಯ್ಯ ಒಬ್ಬರಿಗೆ ಕೊಟ್ಟಿಲ್ಲ. ಕುಮಾರಸ್ವಾಮಿಗೂ ಸೈಟ್ ಬಂದಿದೆ ಅವರ ಸ್ನೇಹಿತರುಗಳಿಗೆಲ್ಲ ಸೈಟ್ ಕೊಟ್ಟಿದ್ದಾರೆ. ಇದೆಲ್ಲ ನಮ್ಮ ಬಳಿ ಮಾಹಿತಿ ಇದೆ ಎಂದರು.
ಬಿ.ಎಸ್ ಯಡಿಯೂರಪ್ಪ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಜಗಳವನ್ನು ಜನ ಹಾಗೂ ಮಾಧ್ಯಮದವರು ಇನ್ನೂ ಮರೆತಿಲ್ಲ. ನನ್ನ ದ್ವೇಷ ಏನಿದ್ದರೂ ಅಪ್ಪ ಮಕ್ಕಳ ಮೇಲೆ ಎಂದಿದ್ದ ಯಡಿಯೂರಪ್ಪ ಇದೀಗ ಕುಮಾರಸ್ವಾಮಿ ಜೊತೆ ಕುಚಿಕು ಆಗಿದ್ದಾರೆ ಎಂದು ಲೇವಡಿ ಮಾಡಿದರು.
ನಮ್ಮ ಕಾಂಗ್ರೆಸ್ ಪಕ್ಷ ನಾಡಿನ ಉದ್ದಗಲಕ್ಕೂ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆ ಮಾಡಿಲ್ಲ. ಜನರಿಗೆ ನೆರವು ನೀಡುತ್ತಿದೆ. ಈ ಪಾದಯಾತ್ರೆ ಬಿಟ್ಟು ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಕೇಂದ್ರದ ಮುಂದಿಟ್ಟು ರಾಜ್ಯಕ್ಕೆ ಅನುದಾನ ತಂದು ತೋರಿಸಿ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಸವಾಲು ಹಾಕಿದರು.