Mysore
21
overcast clouds
Light
Dark

ತುಂಗಭದ್ರಾ ಡ್ಯಾಂ ಗೇಟ್‌ ಕಟ್:‌ ರೈತರು ಗಾಬರಿಯಾಗುವ ಅಂತಕವಿಲ್ಲ; ಡಿಕೆ ಶಿವಕುಮಾರ್

ಕೊಪ್ಪಳ: ಹೊಸಪೇಟೆಯ ತುಂಗಭದ್ರಾ ಜಲಾಶಯದ 19ನೇ ಗೇಟ್ ಕೊಚ್ಚಿ ಹೋಗಿರುವ ಹಿನ್ನೆಲೆ ಇಂದು ಡಿಸಿಎಂ ಡಿಕೆ ಶಿವಕುಮಾರ್ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗೇಟ್ ದುರಸ್ತಿಗೆ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ 12 ಲಕ್ಷ ಎಕರೆ ನೀರಾವರಿಗೆ ಜಲಾಶಯದ ನೀರು ಅಗತ್ಯವಾಗಿ ಬೇಕಾಗಿದೆ. ಶನಿವಾರ ರಾತ್ರಿ ಹತ್ತು ಗೇಟ್ ಮೂಲಕ ನೀರು ಬಿಟ್ಟಾಗ ಅದರಲ್ಲಿ 19ನೇ ಗೇಟ್ ಕಳಚಿಕೊಂಡಿದೆ. ತಕ್ಷಣ ನಮ್ಮ ಅಧಿಕಾರಿಗಳು, ಜನಪ್ರನಿಧಿಗಳು ಚರ್ಚಿಸಿ ಅನುಮತಿ ಪಡೆದು ತಕ್ಷಣ ಎಲ್ಲ ಗೇಟ್ ಮೂಲಕ ನೀರು ಹೊರ ಬಿಡಲಾಗಿದೆ ಎಂದರು

ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ ನಾಲ್ಕು ಜಿಲ್ಲೆಗಳಿಗೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಗೇಟ್ ದುರಸ್ತಿ ಜವಾಬ್ದಾರಿ ಅನುಭವಿ ಸಂಸ್ಥೆಗೆ ವಹಿಸಲಾಗಿದೆ. ನಾರಾಯಣ ಎಂಜಿನಿಯರಿಂಗ್ ಹಾಗೂ ಹಿಂದುಸ್ಥಾನ ಕಂಪನಿಗೆ ಜಲಾಶಯದ ವಿನ್ಯಾಸ ನೀಡಲಾಗಿದೆ. ತಾಂತ್ರಿಕ ತಂಡದವರು ನಿನ್ನೆ ರಾತ್ರಿಯೇ ಇಲ್ಲಿಗೆ ಬಂದು ತಕ್ಷಣ ಕೆಲಸ ಆರಂಭಿಸಿದ್ದಾರೆ ಎಂದು ಮಾಹಿತಿ ನೀಡಿದರು.

ರೈತರಿಗೆ ಒಂದು ಬೆಳೆಗೆ ನೀರು ಉಳಿಸಬೇಕೆಂದು ತೀರ್ಮಾನಿಸಲಾಗಿದೆ. ನೆರೆ ರಾಜ್ಯಗಳಿಗೆ ಅವರ ಪಾಲಿನ 25 ಟಿಎಂಸಿ ಅಡಿ ನೀರು ಕೊಡಲಾಗಿದೆ. ಇನ್ನು 90 ಟಿಎಂಸಿ ಅಡಿ ಕೊಡಬೇಕಿದೆ. ರೈತರು ಗಾಬರಿಯಾಗುವ ಅಗತ್ಯವಿಲ್ಲ. ಮೂರು ಸರ್ಕಾರ ಒಟ್ಟಾಗಿ ಸಮಸ್ಯೆ ನಿವಾರಿಸಲಿವೆ. ರೈತರನ್ನು ಬದುಕಿಸಲು ಬೇಕಾದ ಕ್ರಮ ತೆಗೆದುಕೊಳ್ಳಲಾಗುವುದು. ಭದ್ರತೆ ದೃಷ್ಟಿಯಿಂದ ಜಲಾಶಯದಿಂದ ಎರಡು ಕಿ.ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗುತ್ತಿದ್ದು, ಜನಪ್ರತಿನಿಧಿಗಳು ಸೇರಿ ಇತರರನ್ನು ಬಿಡುವಂತಿಲ್ಲ ಎಂದು ಹೇಳಿದರು.

ಇದು ತಾಂತ್ರಿಕ ವಿಷಯವಾಗಿದ್ದು, ಜಲಾಶಯ ರಾಜ್ಯದ ಸಂಪತ್ತು. ಇದನ್ನು ಉಳಿಸಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಕೊಚ್ಚಿ ಹೋಗಿರುವ ತುಂಗಭದ್ರಾ ಜಲಾಶಯದ ಗೇಟ್ ಅಳವಡಿಕೆ ಕಾರ್ಯ ವೇಗ ಪಡೆದುಕೊಂಡಿದ್ದು. ಬೇರೆ ಟೀಕೆ ಟಿಪ್ಪಣೆಗಿಂತ ಮೊದಲು ಗೇಟ್ ಸರಿಪಡಿಸುವುದು ನಮ್ಮ ಆದ್ಯತೆಯಾಗಿದೆ ಎಂದರು.