ಬೆಂಗಳೂರು: ರಾಜ್ಯಾದ್ಯಂತ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತೊಮ್ಮೆ ಗಂಭೀರ ಸಂಕಷ್ಟದ ಅಂಚಿಗೆ ತಲುಪಿದೆ. ನಾಲ್ಕು ನಿಗಮಗಳ ಸಾರಿಗೆ ನೌಕರರು ಮತ್ತೆ ಮುಷ್ಕರಕ್ಕೆ ಸಜ್ಜಾಗುತ್ತಿದ್ದಾರೆ.
ಈ ಬಾರಿ ಯಾವುದೇ ದಿನಾಂಕ ಘೋಷಣೆ ಇಲ್ಲದೆ, ಏಕಾಏಕಿ ಬಸ್ ಸಂಚಾರ ಸ್ಥಗಿತಗೊಳಿಸುವ ತಂತ್ರವನ್ನು ನೌಕರರು ರೂಪಿಸಿಕೊಂಡಿರುವುದು ಸರ್ಕಾರ ಹಾಗೂ ಸಾರ್ವಜನಿಕರಿಗೆ ಆತಂಕ ತಂದಿದೆ.
ಈ ಹಿಂದೆ ಆಗಸ್ಟ್.5ರಂದು ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ಆದರೆ, ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮುಷ್ಕರವನ್ನು ಕೈಬಿಡಬೇಕಾಯಿತು. ಆ ಬಳಿಕ ಹಲವು ಸುತ್ತಿನ ಮಾತುಕತೆಗಳು ನಡೆದರೂ, ನೌಕರರ ಪ್ರಮುಖ ಬೇಡಿಕೆಗಳಿಗೆ ಸರ್ಕಾರ ಸ್ಪಷ್ಟ ಭರವಸೆ ನೀಡಿಲ್ಲ ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ನೌಕರರು ಮತ್ತೊಮ್ಮೆ ಹೋರಾಟದ ಹಾದಿ ಹಿಡಿಯಲು ನಿರ್ಧರಿಸಿದ್ದಾರೆ.
ಇದನ್ನು ಓದಿ: ಮೈಸೂರು: ಬೀದಿ ನಾಯಿಗಳನ್ನು ದತ್ತು ಪಡೆದ ವಿದೇಶಿ ಪ್ರಜೆಗಳು
ಸಾರಿಗೆ ನೌಕರರ ಬೇಡಿಕೆಗಳ ಕುರಿತು ಇತ್ತೀಚೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಸಭೆ ನಡೆದಿತ್ತು. ಆದರೆ, ವೇತನ ಹೆಚ್ಚಳ, ವೇತನ ಹಿಂಬಾಕಿ ಪಾವತಿ ಸೇರಿದಂತೆ ಪ್ರಮುಖ ವಿಚಾರಗಳಲ್ಲಿ ಒಮ್ಮತ ಮೂಡದೆ ಸಭೆ ಅಂತ್ಯಗೊಂಡಿದೆ. ಈಗಾಗಲೇ ಮುಖ್ಯಮಂತ್ರಿ ಜೊತೆ ನಾಲ್ಕು ಸುತ್ತಿನ ಸಭೆ, ಸಾರಿಗೆ ಸಚಿವರ ಜೊತೆ ಮೂರು ಸುತ್ತಿನ ಚರ್ಚೆ ನಡೆದಿದ್ದರೂ, ಸ್ಪಷ್ಟ ತೀರ್ಮಾನ ಕೈಗೊಳ್ಳದಿರುವುದು ನೌಕರರಲ್ಲಿ ಆಕ್ರೋಶ ಹೆಚ್ಚಿಸಿದೆ.
ಮೂಲಗಳ ಪ್ರಕಾರ, ಬುಧವಾರದಿಂದ ಸಾರಿಗೆ ನೌಕರರ ಮುಖಂಡರು ರಾಜ್ಯದ ಎಲ್ಲ ಬಸ್ ಡಿಪೋಗಳಿಗೆ ಭೇಟಿ ನೀಡಿ, ನೌಕರರನ್ನು ಮುಷ್ಕರಕ್ಕೆ ಸಜ್ಜಾಗುವಂತೆ ಮನವಿ ಮಾಡುವ ಅಭಿಯಾನ ಆರಂಭಿಸಲಿದ್ದಾರೆ. ಯಾವುದೇ ಕ್ಷಣದಲ್ಲಿ ಬಸ್ ಸಂಚಾರ ನಿಲ್ಲುವ ಸಾಧ್ಯತೆ ಇದೆ.
ಮುಂಚಿತವಾಗಿ ಮುಷ್ಕರದ ದಿನಾಂಕ ಘೋಷಿಸಿದರೆ ಸರ್ಕಾರ ಹಾಗೂ ನ್ಯಾಯಾಲಯದಿಂದ ಅಡ್ಡಿಪಡಿಸುವ ಸಾಧ್ಯತೆ ಇದೆ ಎಂಬ ಆತಂಕ ನೌಕರರಲ್ಲಿದೆ. ಹೀಗಾಗಿ ಈ ಬಾರಿ ಕಾರ್ಮಿಕ ಇಲಾಖೆಗೆ ಮುಷ್ಕರ ನೋಟಿಸ್ ನೀಡದೆ, ದಿನಾಂಕ ನಿಗದಿಪಡಿಸದೇ, ಹಠಾತ್ ಸೇವೆ ಸ್ಥಗಿತಗೊಳಿಸುವ ತಂತ್ರ ರೂಪಿಸಲಾಗಿದೆ. ವಾಟ್ಸಾಪ್ ಸೇರಿದಂತೆ ಆಂತರಿಕ ಸಂವಹನ ಮಾಧ್ಯಮಗಳ ಮೂಲಕ ರಾತ್ರೋರಾತ್ರಿ ಸಂದೇಶ ಕಳುಹಿಸಿ, ಏಕಾಏಕಿ ಬಸ್ ಸಂಚಾರ ನಿಲ್ಲಿಸುವ ಪ್ಲಾನ್ ಮಾಡಲಾಗಿದೆ ಎನ್ನಲಾಗಿದೆ.
ಸಾರಿಗೆ ನೌಕರರ ಪ್ರಕಾರ, 38 ತಿಂಗಳ ವೇತನ ಹಿಂಬಾಕಿ ಇನ್ನೂ ಪಾವತಿಯಾಗಿಲ್ಲ. ಜೊತೆಗೆ 2024ರ ಜನವರಿಯಿಂದಲೇ ಸುಮಾರು 1.20 ಲಕ್ಷ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಜಾರಿಯಾಗಬೇಕಿತ್ತು. ಆದರೆ 2025 ಡಿಸೆಂಬರ್ ಬಂದರೂ ಸರ್ಕಾರ ಈ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.





