ಬೆಂಗಳೂರು: ಆಂಧ್ರಪ್ರದೇಶದ ಕರ್ನೂಲ್ ದುರಂತದ ಬೆನ್ನಲ್ಲೇ ರಾಜ್ಯ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡಿದ್ದು, ಹಲವು ಹೊಸ ನಿಯಮಗಳನ್ನು ಜಾರಿಗೊಳಿಸಿದೆ.
ಈ ಬಗ್ಗೆ ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ಎಂಡಿಗಳಿಗೆ ಬಸ್‌ಗಳಲ್ಲಿ ಕೆಲ ನಿಯಮಗಳನ್ನು ಕಡ್ಡಾಯಗೊಳಿಸಲು ಸೂಚನೆ ನೀಡಿದ್ದಾರೆ.
ಬಸ್‌ಗಳಲ್ಲಿ ಬೆಂಕಿ ಸ್ಪರ್ಶಕ್ಕೆ ಸರಳವಾಗಿ ಉರಿಯುವ ವಸ್ತುಗಳ ಸಾಗಣಿಕೆಗೆ ಬ್ರೇಕ್ ಹಾಕಲಾಗುತ್ತದೆ. ಯಾವುದೇ ರೀತಿಯ ಸ್ಫೋಟಕ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ಎಲ್ಲಾ ಎಸಿ ಬಸ್‌ಗಳಲ್ಲಿ ಇನ್ನು ಮುಂದೆ ಸುತ್ತಿಗೆ ಕಡ್ಡಾಯಗೊಳಿಸಲಾಗಿದೆ. ಲಗೇಜ್ ಸಾಗಿಸುವ ಜಾಗದಲ್ಲಿ ಯಾವುದೇ ವ್ಯಕ್ತಿ ಮಲಗಲು ಅವಕಾಶ ಇಲ್ಲ ಎಂದು ಸೂಚನೆ ನೀಡಿದ್ದಾರೆ.
ಜೊತೆಗೆ ಬಸ್ಸುಗಳಲ್ಲಿ ಸುರಕ್ಷತಾ ಆಡಿಟ್ ಪರಿಶೀಲನೆಗೆ ತಂಡಗಳನ್ನು ರಚಿಸಿ, ಬಸ್‌ಗಳಲ್ಲಿ ಯಾವುದೇ ನೂನ್ಯತೆ ಕಂಡುಬಂದರೂ ಕಠಿಣ ಕ್ರಮದ ಆದೇಶಕ್ಕೆ ಸೂಚನೆ ನೀಡಲಾಗಿದೆ.
ಇದರ ನಡುವೆ ನಿನ್ನೆ ಹಾಗೂ ಇಂದು ರಾಜ್ಯ ಸಾರಿಗೆ ಅಧಿಕಾರಿಗಳು ಹಾಗೂ ಟ್ರಾಫಿಕ್ ಪೊಲೀಸರು ಬೆಂಗಳೂರಿನಿಂದ ಹೋಗುವಂತಹ ಎಲ್ಲಾ ಬಸ್ಸುಗಳನ್ನು ಪರಿಶೀಲನೆಗೆ ಮುಂದಾಗಿದ್ದಾರೆ. ಮೆಜೆಸ್ಟಿಕ್‌ನಲ್ಲಿ ಖಾಸಗಿ ಎಸಿ ಬಸ್‌ಗಳ ಪರಿಶೀಲನೆ ನಡೆಸಿ, ಡ್ರೈವರ್ ಲೈಸೆನ್ಸ್, ಬಸ್‌ಗಳ ದಾಖಲೆ ಚೆಕ್ ಮಾಡುತ್ತಿದ್ದಾರೆ.





