Mysore
19
broken clouds

Social Media

ಸೋಮವಾರ, 26 ಜನವರಿ 2026
Light
Dark

ಕೆಜಿಎಫ್‌ ಬಾಬು ಮನೆ ಮೇಲೆ ಸಾರಿಗೆ ಇಲಾಖೆ ಅಧಿಕಾರಿಗಳ ದಾಳಿ: ಕಾರಣ ಇಷ್ಟೇ

kgf babu

ಬೆಂಗಳೂರು: ಕಾಂಗ್ರೆಸ್ ಮುಖಂಡರಾಗಿದ್ದ ಕೆಜಿಎಫ್ ಬಾಬು ಅವರ ಮನೆಯ ಮೇಲೆ ಸಾರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಐಶಾರಾಮಿ ಕಾರುಗಳಿಗೆ ತೆರಿಗೆ ವಸೂಲಿಗೆ ಮುಂದಾಗಿದ್ದಾರೆ.

ಬೆಂಗಳೂರಿನ ವಸಂತನಗರದಲ್ಲಿರುವ ಕೆಜಿಎಫ್ ಬಾಬು ಅವರ ರುಕ್ಸಾನಾ ಪ್ಯಾಲೇಸ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಐಷಾರಾಮಿ ಕಾರುಗಳಿಗೆ ತೆರಿಗೆ ಕಟ್ಟದ ಹಿನ್ನೆಲೆಯಲ್ಲಿ ಆರ್‌ಟಿಓ ಅಧಿಕಾರಿಗಳು ಕೆಜಿಎಫ್ ಬಾಬು ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಕೆಜಿಎಫ್ ಬಾಬುಗೆ ಸೆಲೆಬ್ರಿಟಿಗಳು ಬಳಕೆ ಮಾಡಿದ ಕಾರುಗಳನ್ನು ಖರೀದಿ ಮಾಡುವ ಕ್ರೇಜ್ ಇದೆ. ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳ ಕಾರು ಎಂದರೆ ಅವರು ಖರೀದಿಸಿ ತರುತ್ತಾರೆ. ಕೆಜಿಎಫ್ ಬಾಬು ಬಳಿ ಎರಡು ರೋಲ್ಸ್ ರಾಯ್ಸ್ ಕಾರಿದೆ. ಅಮಿತಾಭ್ ಬಚ್ಚನ್ ಹಾಗೂ ಆಮಿರ್ ಖಾನ್ ಒಂದು ವರ್ಷ ಮಾತ್ರ ಬಳಸಿದ್ದ ಕಾರನ್ನು ಕೆಜಿಎಫ್ ಬಾಬು ಖರೀದಿಸಿ ತಂದಿದ್ದರು.

ಈಗ ಬಾಬು ತೆರಿಗೆ ಕಟ್ಟದ ಕಾರಣ ಆರ್‌ಟಿಓ ಜಂಟಿ ಆಯುಕ್ತೆ ಶೋಭಾ ನೇತೃತ್ವದ ತಂಡ ಬಾಬು ಮನೆಯ ಮೇಲೆ ದಾಳಿ ನಡೆಸಿತು. ಈ ವೇಳೆ ಗೇಟ್ ತೆಗೆಯದೆ ಕೆಜಿಎಫ್ ಬಾಬು ಮೊಂಡಾಟ ಪ್ರದರ್ಶಿಸಿದರು.

ಅಮಿತಾಬ್‌ ಬಚ್ಚನ್‍ರವರಿಂದ 2019ರಲ್ಲಿ ಖರೀದಿಸಿದ್ದ ರೋಲ್ಸ್‌ ರಾಯ್ಸ್‌ಗೆ ಉತ್ಪಾದಕ ಸಂಸ್ಥೆಯ ಇನ್ವಾಯ್ಸ್ ಲಭ್ಯವಿಲ್ಲ ಎನ್ನಲಾಗಿದೆ. ಅಮಿರ್‌ ಖಾನ್‌ರಿಂದ 2 ವರ್ಷಗಳ ಹಿಂದೆ ಇನ್ನೊಂದು ರೋಲ್ಸ್ ರಾಯ್ಸ್ ಅನ್ನು ಖರೀದಿಸಿದ್ದಾರೆ. ಈ ಎರಡೂ ಕಾರುಗಳು ಮಹಾರಾಷ್ಟ್ರದಲ್ಲಿ ನೋಂದಣಿಯಾಗಿವೆ. ಹೀಗಾಗಿ ಕರ್ನಾಟಕದ ಸಾರಿಗೆ ಇಲಾಖೆ ಅಧಿಕಾರಿಗಳು ಇಂದು ಬೆಳಿಗ್ಗೆ ಕೆಜಿಎಫ್ ಬಾಬು ಅವರ ಮನೆಗೆ ದಾಳಿ ಮಾಡಿದರು. ವಾಹನಗಳನ್ನು ಜಪ್ತಿ ಮಾಡಲು ಮುಂದಾದಾಗ ಕೆಜಿಎಫ್ ಬಾಬು ವಿರೋಧ ವ್ಯಕ್ತಪಡಿಸಿದ್ದಾರೆ.

ಎರಡು ವಾಹನಗಳನ್ನೂ ಮಹಾರಾಷ್ಟ್ರದಲ್ಲಿರುವ ನಮ್ಮ ಕಚೇರಿ ಮೂಲಕ ಮುಂಬೈನಲ್ಲೇ ನೋಂದಣಿ ಮಾಡಿಸಿದ್ದೇನೆ. ಅಲ್ಲಿ 15 ದಿನ, ಇಲ್ಲಿ 15 ದಿನ ವಾಹನಗಳು ಸಂಚರಿಸುತ್ತವೆ. ಕರ್ನಾಟಕ ರಾಜ್ಯದಲ್ಲೂ ತೆರಿಗೆ ಪಾವತಿಸಬೇಕು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ನೋಟೀಸ್ ಕೊಟ್ಟರೆ ತಕ್ಷಣ ತಾವು ತೆರಿಗೆ ಪಾವತಿಸಲು ಸಿದ್ಧರಿರುವುದಾಗಿ ಕೆಜಿಎಫ್ ಬಾಬು ಹೇಳಿದ್ದಾರೆ.

ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿ ಶೋಭಾ ಅವರ ನೇತೃತ್ವದಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಕೊನೆಗೆ ಕೆಜಿಎಫ್ ಬಾಬು ಅವರು ಅಮಿತಾಬ್‌ ಬಚ್ಚನ್ ಅವರಿಂದ ಖರೀದಿಸಿದ ಕಾರಿಗೆ 19 ಲಕ್ಷದ 73 ಸಾವಿರ ರೂ, ಅಮೀರ್‌ಖಾನ್‌ರಿಂದ ಖರೀದಿಸಿದ ಕಾರಿಗೆ 18 ಲಕ್ಷದ 53 ಸಾವಿರ ರೂ. ಗಳ ತೆರಿಗೆಯನ್ನು ಡಿಡಿ ಮೂಲಕ ಪಾವತಿಸಿದರು. ಕೊನೆಗೆ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಕೆಜಿಎಫ್ ಬಾಬು ಶ್ಲಾಘಿಸಿದರು.

Tags:
error: Content is protected !!