ಬೆಂಗಳೂರು : ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ ಕಾವೇರಿ ಆರತಿಗೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಗಂಗಾ ಆರತಿ ಬೇಕು ಎಂದಿದ್ದಾರೆ. ಕರ್ನಾಟಕದಲ್ಲಿ ಕಾವೇರಿ ಆರತಿಗೆ ವಿರೋಧ ವ್ಯಕ್ತಪಡಿಸುತ್ತಾರೆ. ಅವರಿಗೆ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದಷ್ಟೇ ಮುಖ್ಯ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಕೆಲ ಶಾಸಕರ ಅಸಮಾಧಾನದ ಕುರಿತು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ಚರ್ಚಿಸಿ ಬಗೆಹರಿಸುತ್ತಾರೆ. ಆರೇಳು ಬಾರಿ ಗೆದ್ದ ಹಿರಿಯ ಶಾಸಕರು ಕಾಂಗ್ರೆಸ್‌ನಲ್ಲಿದ್ದಾರೆ. ಶಾಸಕಾಂಗ ಸಭೆಯಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಚರ್ಚೆ ಮಾಡಲು ಅವಕಾಶ ಇದೆ. ಅದನ್ನು ಬಿಟ್ಟು ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ವಸತಿ ಯೋಜನೆಗಳಲ್ಲಿ ಬಡವರಿಂದ ಹಣ ಪಡೆಯುವ ದಾರಿದ್ರ್ಯ ಜಮೀರ್ ಅಹಮದ್ ಖಾನ್ ಅವರಿಗಿಲ್ಲ. ಸಾಕಷ್ಟು ದಾನ ಧರ್ಮ ಮಾಡಿ ಹೆಸರುವಾಸಿಯಾಗಿರುವ ಜಮೀರ್ ವಸತಿ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ.2022ರಲ್ಲಿ ಮನೆ ಮಂಜೂರಾತಿ ಪಡೆದಿದ್ದವರಿಗೆ ಈಗ ಸ್ವಾಽನ ಪತ್ರ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರ ಆದಿಯಾಗಿ ಎಲ್ಲರೂ ಸೇರಿಯೇ ಶಾಸಕರಿಗೆ ಅನುದಾನ ನೀಡುತ್ತಿದ್ದಾರೆ. ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಅವರ ಅನುಮತಿಯೂ ಅಗತ್ಯವಿದೆ ಎಂದು ಹೇಳಿದ ಗಣಿಗ ರವಿ, ಅನುದಾನ ಬೇಕಿದ್ದರೆ ಶಾಸಕರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಲಿ ಎಂದು ಬಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿದರು.





