ಬೆಂಗಳೂರು: ನಮ್ಮ ಬಳಿ ದುಡ್ಡಿಲ್ಲ. ಸಿದ್ದರಾಮಯ್ಯ ಬಳಿ ದುಡ್ಡಿಲ್ಲ ಎಂದು ಹೇಳಿಕೆ ನೀಡಿದ್ದ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದು ಸ್ಪಷ್ಟನೆ ನೀಡಿದ್ದು, ಸರ್ಕಾರದಲ್ಲಿ ಹಣಕಾಸಿನ ಕೊರತೆಯಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ ಹಣಕಾಸಿನ ತೊಂದರೆಯಿಲ್ಲ. ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಹಣ ಕೊಟ್ಟಿದ್ದಾರೆ. ಅವರು ಯಾರೋ ತಮಾಷೆಗೆ ಕೇಳಿದ್ರು ಎಂದು ನಾನು ತಮಾಷೆಯಾಗಿ ಮಾತನಾಡಿದ್ದೆ. ಆದರೆ ಅದು ಬರೀ ತಮಾಷೆಯಷ್ಟೇ. ನಮ್ಮ ಸರ್ಕಾರದಲ್ಲಿ ಹಣದ ಕೊರತೆಯಿಲ್ಲ. ಆದರೆ ಬಿಡುಗಡೆ ಆಗುವಾಗ ಸ್ವಲ್ಪ ವಿಳಂಬವಾಗುತ್ತದೆ. ನನ್ನ ಹೇಳಿಕೆ ಬಗ್ಗೆ ತಪ್ಪು ಕಲ್ಪನೆ ಬೇಡ. ನಾನು ಸರ್ಕಾರದ ಬಳಿ ಹಣವಿಲ್ಲ ಎಂದು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರು.
ಇನ್ನು ಬಾಗಲಕೋಟೆಯಲ್ಲಿ ನಿನ್ನೆ ಮಾತನಾಡಿದ್ದ ಗೃಹ ಸಚಿವ ಪರಮೇಶ್ವರ್ ಅವರು, ಬಾದಾಮಿ ಅಭಿವೃದ್ಧಿಗೆ ಒಂದು ಯೋಜನೆ ಸಿದ್ಧಮಾಡಿ ಕೇಂದ್ರಕ್ಕೆ ಕಳುಹಿಸಿಕೊಡಿ. ಯಾಕೆಂದರೆ ನಮ್ಮ ಬಳಿ ಹಣವಿಲ್ಲ. ಸಿದ್ದರಾಮಣ್ಣನ ಬಳಿ ದುಡ್ಡಿಲ್ಲ ಎಂದು ಹೇಳಿದ್ದರು. ಗೃಹ ಸಚಿವ ಪರಮೇಶ್ವರ್ ಹೇಳಿಕೆಗೆ ವಿಪಕ್ಷ ನಾಯಕರು ಕಿಡಿಕಾರಿದ್ದು, ರಾಜ್ಯ ಸರ್ಕಾರದ ಬೊಕ್ಕಸ ಸಂಪೂರ್ಣ ಖಾಲಿಯಾಗಿದೆ. ಇದನ್ನು ಪರಮೇಶ್ವರ್ ಅವರೇ ಒಪ್ಪಿಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದರು.





