ಬಳ್ಳಾರಿ: ರಾಜ್ಯದಲ್ಲಿ ಯಾವುದೇ ನವೆಂಬರ್ ಕ್ರಾಂತಿ ಆಗಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ರಾಜ್ಯದಲ್ಲಿ ಭಾರೀ ಚರ್ಚೆಯಲ್ಲಿರುವ ನವೆಂಬರ್ ಕ್ರಾಂತಿ ಬಗ್ಗೆ ಬಳ್ಳಾರಿಯಲ್ಲಿಂದು ಮಾಧ್ಯಮದವರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನೋಡಿ ಈಗಾಗಲೇ ನವೆಂಬರ್ ಮುಗಿಯುತ್ತ ಬಂದಿದೆ. ಆದ್ದರಿಂದ ಯಾವ ಕ್ರಾಂತಿಯೂ ಆಗಲ್ಲ. ಸಿಎಂ ಬದಲಾವಣೆ ವಿಚಾರ ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಏನೇ ಇದ್ದರೂ ನಮ್ಮ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ನಮ್ಮ ಕಾಂಗ್ರೆಸ್ ಪಕ್ಷ ಬಿಜೆಪಿ ಪಕ್ಷದ ತರ ಅಲ್ಲ. ನಮ್ಮ ಪಾಡಿಗೆ ನಾವು ಕೆಲಸ ಮಾಡುತ್ತಾ ಇದ್ದೇವೆ. ಬಿಹಾರ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮೊದಲೇ ಪ್ರಚಾರ ಮಾಡಿ ಬಂದಿದ್ದರು. ಆ ಬಳಿಕ ಡಿಸಿಎಂ ಹೋದ್ರು, ಅವರು ಪಕ್ಷದ ಅಧ್ಯಕ್ಷರು ಹೀಗಾಗಿ ಪದೇ ಪದೇ ಹೋಗುತ್ತಾರೆ ಎಂದು ಹೇಳಿದರು.
ಇನ್ನು ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ನಿನ್ನೆಯೇ ತೀರ್ಮಾನ ಆಗಿದೆ. ನಿನ್ನೆಯೇ ರೈತರು ಪ್ರತಿಭಟನೆ ವಾಪಸ್ ಪಡೆದಿದ್ದಾರೆ. ಕೆಲವು ಕಡೆ ಅಷ್ಟೇ ಸ್ವಲ್ಪ ಪ್ರತಿಭಟನೆ ಇರಬಹುದು. ಸಿಎಂ ನಿನ್ನೆ ನಿರಂತರವಾಗಿ ಮಾಲೀಕರ ಹಾಗೂ ರೈತರ ಜೊತೆ ಮಾತಾಡಿದ್ದಾರೆ. 3250 ರೂ ಕಾರ್ಖಾನೆ ಕೊಡಬೇಕು, 50 ರೂಪಾಯಿ ಸರ್ಕಾರ ಕೊಡುತ್ತೆ ಎಂದು ತೀರ್ಮಾನ ಆಗಿದೆ ಎಂದು ನಿನ್ನೆಯ ಸಿಎಂ ಸಿದ್ದರಾಮಯ್ಯ ಸಭೆ ಬಗ್ಗೆ ಮಾಹಿತಿ ನೀಡಿದರು.





