Mysore
23
scattered clouds

Social Media

ಶುಕ್ರವಾರ, 17 ಏಪ್ರಿಲ 2026
Light
Dark

ಪಶ್ಚಿಮಘಟ್ಟಗಳನ್ನು ಭವಿಷ್ಯದ ಪೀಳಿಗೆಯ ಜೀವನಾಡಿಯಾಗಿ ನೋಡಬೇಕು: ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ಪ್ರಕೃತಿ, ಪರಿಸರ ಸಂರಕ್ಷಣೆ ಹಾಗೂ ಹಸಿರು ಹೊದಿಕೆ ಹೆಚ್ಚಳದಲ್ಲಿ ಸುಸ್ಥಿರ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪಾತ್ರ ಹಿರಿದಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್.ಕೆ.ಸಿಸಿಐ) ಆಯೋಜಿಸಿದ್ದ ಜಾಗತಿಕ ಸುಸ್ಥಿರ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಶೃಂಗಸಭೆ 2026ರ ಪೂರ್ವಭಾವಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ನಾವಿಂದು, ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ಬದಲಾವಣೆಯ ಪರಿಣಾಮಗಳ ಕಾಲಘಟ್ಟದಲ್ಲಿ ನಿಂತಿದ್ದು, ಈ ಸಂದರ್ಭದಲ್ಲಿ ಸುಸ್ಥಿರ ಅಭಿವೃದ್ಧಿ, ಹವಾಮಾನ ಚೇತರಿಕೆ ಮತ್ತು ಸಮಗ್ರ ಪ್ರಗತಿಯ ಕಾರ್ಯತಂತ್ರಕ್ಕೆ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಚಾಲಕಶಕ್ತಿಯಾಗಿದೆ ಎಂದರು.

ಕರ್ನಾಟಕವು ಈ ಪಯಣದಲ್ಲಿ ವಿಶಿಷ್ಟ ಸ್ಥಾನದಲ್ಲಿದೆ. ಜಾಗತಿಕ ಜೀವವೈವಿಧ್ಯತೆಯ ಅದ್ಭುತ ತಾಣವಾದ ಪಶ್ಚಿಮ ಘಟ್ಟಗಳನ್ನು ಹೊಂದಿದ್ದು, ಹಲವು ಬಗೆಯ ವಿಶಿಷ್ಟ ಸಸ್ಯ ಸಂಕುಲ, ಪ್ರಾಣಿ ಸಂಕುಲ, ಪಕ್ಷಿ ಸಂಕುಲ ಹಾಗೂ ಕೀಟ ಸಂಕುಲಗಳ ತಾಣವಾದ ಈ ಸಮೃದ್ಧ ಕಾನನವನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಹಲವು ಜೀವನದಿಗಳ ಮೂಲವೇ ಪಶ್ಚಿಮಘಟ್ಟವಾಗಿದ್ದು, ಮಳೆಯ ಮಾರುತಗಳನ್ನು ತಡೆದು ದೇಶಾದ್ಯಂತ ವ್ಯಾಪಕವಾಗಿ ಮಳೆ ಸುರಿಸುವಂತೆ ಮಾಡುವ ಪಶ್ಚಿಮ ಘಟ್ಟಗಳನ್ನು ಉದ್ದಿಮೆದಾರರು ಕೇವಲ ಒಂದು ಸಂಪನ್ಮೂಲವಾಗಿ ನೋಡದೆ, ಭವಿಷ್ಯದ ಪೀಳಿಗೆಯ ಜೀವನಾಡಿಯಾಗಿ ನೋಡಬೇಕು ಎಂದು ಹೇಳಿದರು.

ಬೆಂಗಳೂರು ನಗರ ಒಂದು ಕಾಲದಲ್ಲಿ ನಿವೃತ್ತರ ಸ್ವರ್ಗ, ಹವಾನಿಯಂತ್ರಿತ ನಗರ ಎಂಬ ಖ್ಯಾತಿ ಪಡೆದಿತ್ತು. ಇಂದು ಬೆಂಗಳೂರು ಕೂಡ ಕಾಂಕ್ರೀಟ್ ಕಾಡಾಗುತ್ತಿದ್ದು, ತಾಪಮಾನದ ಏರಿಕೆಯ ಅನುಭವ ಆಗುತ್ತಿದೆ. ಬೆಂಗಳೂರು ನಗರದಲ್ಲಿ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಧೂಳು, ಹೊಗೆಯಿಂದಾಗಿ ವಾಯುಗುಣಮಟ್ಟವೂ ಕುಸಿಯುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರ ದೆಹಲಿಯಂತೆ ಮತ್ತೊಂದು ಗ್ಯಾಸ್ ಚೇಂಬರ್ ಆಗದಂತೆ ತಡೆಯಲು ಈಗಿನಿಂದಲೇ ಕ್ರಮ ವಹಿಸುವುದು ಅತ್ಯಗತ್ಯ ಎಂದರು.

 

Tags:
error: Content is protected !!