ಬೆಂಗಳೂರು : ರಾಜ್ಯದಲ್ಲಿರುವ ನದಿಗಳ ನೀರಿನ ಕಲುಷಿತ ವಾತಾವರಣ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯೊಂದನ್ನು ಸಿದ್ಧಪಡಿಸಿದೆ. ಈ ವರದಿಯಲ್ಲಿ ರಾಜ್ಯದ 12 ನದಿಗಳ ನೀರು ಕುಡಿಯಲು ಸುರಕ್ಷಿತವಲ್ಲ ಎಂಬ ಮಾಹಿತಿ ನೀಡಿದೆ.
ಸೆಪ್ಟೆಂಬರ್‌ನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯದ 12 ಪ್ರಮುಖ ನದಿಗಳ ನೀರಿನ್ನು 32 ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದು, 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ನೀಡಿದೆ. 12 ನದಿಗಳ ನೀರಲ್ಲಿ ಆಮ್ಲಜನಕದ ಕೊರತೆ ಇರೋದು ಪತ್ತೆಯಾಗಿದ್ದು, ಪರೀಕ್ಷೆಗೆ ಒಳಪಟ್ಟ ನದಿಗಳ ಪೈಕಿ ಒಂದೂ ನದಿಗೂ `ಎ’ ದರ್ಜೆ ಸಿಕಿಲ್ಲ. ಹೀಗಾಗಿ ಯಾವುದೇ ನದಿ ನೀರನ್ನು ನೇರವಾಗಿ ಕುಡಿಯಲು ಬಳಕೆ ಮಾಡಬಾರದು. ನದಿಗಳ ನೀರಿನಲ್ಲಿ ಆಮ್ಲಜನಕದ ಕೊರತೆ, ಬಯೋಕೆಮಿಕಲ್ ಆಕ್ಸಿಜನ್, ಕೋಲಿಫಾರ್ಮ್ ಬ್ಯಾಕ್ಟೀರಿಯಾ, ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ಜೀವನದಿ ಕಾವೇರಿಯೂ ಸೇರಿ 12 ನದಿ ನೀರು ಕಲುಷಿತವಾಗಿದೆ. ನೇತ್ರಾವತಿ ನದಿಗೆ ಮಾತ್ರ ಬಿ ದರ್ಜೆ ಸಿಕ್ಕಿದ್ದು, ಸ್ನಾನ ಹಾಗೂ ಗೃಹಬಳಕೆಗೆ ನೇತ್ರಾವತಿ ನದಿ ಯೋಗ್ಯ ಎನ್ನಲಾಗಿದೆ. ಇನ್ನುಳಿದಂತೆ 8 ನದಿಗಳಿಗೆ ಸಿ ಹಾಗೂ 3 ನದಿಗಳಿಗೆ ಡಿ ದರ್ಜೆ ಸಿಕ್ಕಿದೆ. ‘ಸಿ’ ದರ್ಜೆ ಹೊಂದಿರುವ ನದಿ ನೀರನ್ನು ಸಂಸ್ಕರಿಸಿ ಬಳಸಬಹುದಾಗಿದ್ದು, ಆ ದರ್ಜೆಯ ನೀರನ್ನು ಮೀನುಗಾರಿಕೆ ಸೇರಿ ಇನ್ನಿತರ ಚಟುವಟಿಕೆಗೆ ಬಳಸಬಹುದಾಗಿದೆ ಎಂದು ಪರೀಕ್ಷೆಯಲ್ಲಿ ತಿಳಿದುಬಂದಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಏರ್ಪಡಿಸಿದ ಟೆಸ್ಟ್‌ನ ಪ್ರಕಾರ ಕರ್ನಾಟಕದ ನದಿ ನೀರುಗಳಲ್ಲಿ BOD ಎಂದರೆ ಬಯೋಲಾಜಿಕಲ್ ಆಕ್ಸಿಜನ್ ಡಿಮ್ಯಾಂಡ್ ತೀವ್ರವಾಗಿದೆ. ಹೀಗೆಂದರೆ ನೀರಿನಲ್ಲಿ ಜೈವಿಕ ತ್ಯಾಜ್ಯದ ಹೆಚ್ಚಳವಾಗಿ ಅದನ್ನು ಕರಗಿಸಲು ಬ್ಯಾಕ್ಟೀರಿಯಾಗಳ ಕಾರ್ಯಚಟುವಟಿಕೆ ತೀವ್ರವಾಗಿರುತ್ತದೆ. ಇದರಿಂದ ನೀರಿನಲ್ಲಿನ ಜೀವಿಗಳಿಗೆ ಹಾನಿಯಾಗಲಿದೆ.
ಇದನ್ನು ಓದಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ಹಿಂಗಾರು ಮಳೆಯ ಆರ್ಭಟ: ಕೆಆರ್‌ಎಸ್‌ಗೆ ಹೆಚ್ಚಿದ ಒಳಹರಿವು
ಎಷ್ಟು BOD ಹೆಚ್ಚಿತೋ ನೀರು ಅಷ್ಟು ಕಲುಷಿತ. ರಾಜ್ಯದ ನದಿಗಳಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾ, ಫೀಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಹೆಚ್ಚಾಗಿದೆ! ದನ-ಕರುಗಳ ಕರುಳು, ಮನುಷ್ಯರ ಕರುಳಲ್ಲಿ ಹೆಚ್ಚಾಗಿರುವ ಈ ಬ್ಯಾಕ್ಟೀರಿಯಾದ ನದಿ ನೀರಿನಲ್ಲಿನ ಹೆಚ್ಚಳ ನದಿ ತೀರಗಳಲ್ಲಿ ಈಗಲೂ ಬಯಲು ವಿಸರ್ಜನೆ ವ್ಯಾಪಕವಾಗಿ ನಡೆಯುತ್ತಿದೆ? ಎಂಬ ಆಘಾತಕಾರಿ ಅಂಶವನ್ನು ಹೊರಪಡಿಸಿದೆ.
ಈಗಾಗಲೇ ಶರಾವತಿಯ ಗರ್ಭಕ್ಕೆ ಕೈ ಹಾಕುವ ದುರಾಲೋಚನೆ ಮಾಡಿರುವ ಸರ್ಕಾರದ ನಡೆಯ ನಡುವೆ ಉತ್ತರ ಕನ್ನಡದ ಯಾವ ನದಿಯೂ ಪರೀಕ್ಷೆಗೆ ಒಳಪಟ್ಟಿಲ್ಲ?! ಅಘನಾಶಿನಿ, ಶರಾವತಿ, ವರದಾ, ವೆಂಕಟಾಪುರ, ಕಾಳಿ, ಬೇಡ್ತಿ, ಗಂಗಾವಳಿಗಳನ್ನು ಪಟ್ಟಿಯಿಂದ ಬಿಟ್ಟಿದ್ಯಾಕೆ? ಕುಂದಾಪುರದ ವಾರಾಹಿ, ಸೀತಾ, ಬ್ರಾಹ್ಮಿ ನದಿಗಳನ್ನು ಯಾಕೆ ಈ ಪಟ್ಟಿಯಲ್ಲಿ ತಂದಿಲ್ಲ? ಎಂಬ ವಿಷಯ ಉತ್ತರ ಕನ್ನಡದ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಎತ್ತಿ ಹಿಡಿಯುತ್ತಿದೆ.
ನೇತ್ರಾವತಿ ನದಿ ಅಹುದು ಸುರನದಿ ಇರುವ ನದಿಗಳಲ್ಲಿ ಬಿ ದರ್ಜೆ ಇರುವುದು ನೇತ್ರಾವತಿಗೆ ಮಾತ್ರ! ಸ್ನಾನಘಟ್ಟಗಳಲ್ಲಿ ಆ ಮಟ್ಟಿಗಿನ ಮಾಲಿನ್ಯದ ಹೊರತಾಗಿಯೂ ಈ ನದಿನೀರನ್ನು ಈ ಮಟ್ಟಿಗಾದರೂ ಶುಚಿಯಾಗಿಟ್ಟುಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ನೇತ್ರಾವತಿ ವ್ಯಾಪ್ತಿಯ ಆಯಾ ದೇವಳಗಳ ಆಡಳಿತಕ್ಕೆ ಈ ಶ್ರೇಯಸ್ಸು ಸಿಗಬೇಕು.
ರಾಜ್ಯದಲ್ಲಿ ಕಾವೇರಿ, ಕೃಷ್ಣ ಸೇರಿ 7 ಪ್ರಮುಖ ನದಿಗಳು, ಅವುಗಳನ್ನು ಸಂಧಿಸುವ 20ಕ್ಕೂ ಹೆಚ್ಚಿನ ಉಪನದಿಗಳಿವೆ. ಆ ಪೈಕಿ ಶೇ.80ಕ್ಕೂ ಹೆಚ್ಚಿನನದಿಗಳು ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಹುಟ್ಟುತ್ತವೆ. ಈ ನದಿಗಳಲ್ಲಿ ಸುಮಾರು 3,700 ಟಿಎಂಸಿಗೂ ಹೆಚ್ಚಿನ ನೀರು ಹರಿಯುತ್ತವೆ. ಆದರೆ, ಕೈಗಾರಿಕೆ, ಗೃಹಬಳಕೆ ತ್ಯಾಜ್ಯ ನೀರು ನದಿಗಳಿಗೆ ಸೇರಿ ನೀರು ಕಲುಷಿತವಾಗಿ ಬಳಕೆಗೆ ಯೋಗ್ಯವಲ್ಲದಂತಾಗಿದೆ.
ಯಾವ್ಯಾವ ನದಿಗಳ ಯಾವ ದರ್ಜೆ?
ಬಿ ದರ್ಜೆ: ನೇತ್ರಾವತಿ
ಸಿ ದರ್ಜೆ: ಲಕ್ಷ್ಮಣತೀರ್ಥ, ತುಂಗಾಭದ್ರ, ಕಾವೇರಿ, ಕಬಿನಿ, ಕೃಷ್ಣಾ, ಶಿಂಷಾ
ಡಿ ದರ್ಜೆ: ಭೀಮಾನದಿ, ಕಾಗಿಣಾ, ಅರ್ಕಾವತಿ.





