ಬೆಂಗಳೂರು: ರೈತರ ಭೂಮಿಯನ್ನು ಕಬಳಿಕೆ ಮಾಡುತ್ತಿರುವ ವಕ್ಫ್ ಮಂಡಳಿ ರದ್ದಾಗಬೇಕು ಹಾಗೂ ರೈತರ ಜಮೀನಿನ ಪಹಣಿಯಲ್ಲಿ ದಾಖಲೆಯಾಗಿರುವ ವಕ್ಫ್ ಹೆಸರು ತೆಗೆಯಬೇಕು ಎಂದು ಸರ್ಕಾರಕ್ಕೆ ಆರ್.ಅಶೋಕ್ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ನ.22) ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂದಿನ ಕಾಲದ ಯುಪಿಎ ಸರ್ಕಾರಕ್ಕೆ ವಕ್ಫ್ ಮಂಡಳಿ ಸ್ಥಾಪಿಸುವಂತೆ ಅಧಿಕಾರ ನಡೆಸುವಂತೆ ನ್ಯಾಯಾಂಗ ಅಧಿಕಾರ ನೀಡಿತ್ತು. ಅದನ್ನೇ ಇಂದು ರಾಜ್ಯ ಸರ್ಕಾರ ಬಳಸಿಕೊಂಡು ವಕ್ಫ್ ಮಂಡಳಿ ಹೆಸರಿನಲ್ಲಿ ರೈತರ ಜಮೀನು ನುಂಗುತ್ತಿದೆ. ಅಲ್ಲದೇ ಕೆಆರ್‌ಎಸ್ ಅಣೆಕಟ್ಟು ನಿರ್ಮಿಸಿದ ವಿಶ್ವವಿಖ್ಯಾತ ಎಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯನವರು ಓದಿದ ಶಾಲೆಯ ಆವರಣವನ್ನು ಸಹ ವಕ್ಫ್ ಮಂಡಳಿ ಕಬಳಿಸಿದೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರ ಮುಂದಿನ ದಿನಗಳಲ್ಲಿ ವಕ್ಫ್ ಮಂಡಳಿ ಹೆಸರಿನಲ್ಲಿ ವಿಧಾನಸೌಧ, ಲಾಲ್‌ಬಾಗ್ ಕೂಡ ನಮ್ಮದೆಂದು ಹೇಳಿದರೆ ಆಶ್ವರ್ಯವಿಲ್ಲ. ಈ ಹಿಂದೆ ಬೌರಿಂಗ್ ಆಸ್ಪತ್ರೆಯ 2 ಎಕರೆ ಜಮೀನನ್ನು ವಕ್ಫ್ ಮಂಡಳಿ ಕಬಳಿಕೆ ಮಾಡಿತ್ತು. ಆದರೆ ನಾನು ಸಚಿವನಾಗಿದ್ದ ವೇಳೆ ಅದರ ದಾಖಲೆಗಳನ್ನು ತರಿಸಿ ನೋಡಿದರೆ ಯಾವುದೋ ಹಳೆ ದಾಖಲೆಗಳನ್ನು ತಂದರು. ಬಳಿಕ ಆ ಜಾಗವನ್ನು ಹೋರಾಟ ಮಾಡಿ ಆಸ್ತಿ ಉಳಿಸಬೇಕಾಯಿತು. ವಕ್ಫ್ ಮಂಡಳಿ ತಿಮಿಂಗಿಲದಂತೆ ಬಡವರ ಜಮೀನು ನುಂಗಿ ರೈತರು ಕಂಗಾಲಾಗುವಂತೆ ಮಾಡುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತ ಪಡಿಸಿದ್ದಾರೆ.
ರಾಜ್ಯದಲ್ಲಿ ಮುಸ್ಲಿಮರಿಗೆ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಮೇಲೆ ಎರಡು ಕೊಂಬು ಬಂದಿದೆ. ಸಿದ್ದರಾಮಯ್ಯರೆಂದರೆ ಅಹಿಂದ ನಾಯಕ ಅಲ್ಲ. ಅವರೊಬ್ಬರು ಮುಸ್ಲಿಮರ ಚಾಂಪಿಯನ್ ಆಗಲು ಮುಂದಾಗಿದ್ದಾರೆ. ಸರ್ಕಾರ ಲ್ಯಾಂಡ್ ಜಿಹಾದ್ ನಂತರ ರೇಷನ್ ಕಾರ್ಡ್ ಜಿಹಾದ್‌ಅನ್ನು ಪ್ರಾರಂಭಿಸಿದೆ ಎಂದು ವ್ಯಂಗ್ಯವಾಡಿದ್ದಾರೆ.