ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ನಮ್ಮ ಪಕ್ಷಕ್ಕೆ ಬಂದರೂ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಶ್ರೀರಾಮುಲುರನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ತರಲು ಪ್ರಯತ್ನ ಮಾಡಿದ್ದಾರೆ ಎಂಬ ಜನಾರ್ಧನ ರೆಡ್ಡಿ ಹೇಳಿಕೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಯಾರೇ ಬಂದರೂ, ಯಾರನ್ನು ತುಳಿಯಲು ಸಾಧ್ಯವಿಲ್ಲ. ಸತೀಶ್ ಜಾರಕಿಹೊಳಿ ಹಿರಿಯರು. ಒಬ್ಬರನ್ನು ತುಳಿದು ರಾಜಕೀಯ ಮಾಡೋದು ಕಾಂಗ್ರೆಸ್‌ನಲ್ಲಿ ಇಲ್ಲ.ಇದು ನಡೆಯೋದು ಬರೀ ಬಿಜೆಪಿಯಲ್ಲಿ ಮಾತ್ರ ಎಂದರು.
ಇನ್ನು ಜನಾರ್ಧನ ರೆಡ್ಡಿ ವಿರುದ್ಧ ಕಿಡಿಕಾರಿದ ಚಲುವರಾಯಸ್ವಾಮಿ ಅವರು, ರೆಡ್ಡಿಗೆ ಮೊದಲು ಅವರ ಪಕ್ಷ ಸರಿ ಮಾಡಿಕೊಳ್ಳೋಕೆ ಹೇಳಿ. ಮೊದಲು ಯತ್ನಾಳ್, ಜಾರಕಿಹೊಳಿಯನ್ನು ಸರಿ ಮಾಡಿ, ಆಮೇಲೆ ಮಾತನಾಡಲಿ. ಕಾಂಗ್ರೆಸ್ ಹೈಕಮಾಂಡ್ ತುಂಬಾ ಸ್ಟ್ರಾಂಗ್ ಆಗಿದೆ. ಅಲ್ಲದೇ ಎಐಸಿಸಿ ಭದ್ರವಾಗಿದೆ. ಮೊದಲು ಬಿಜೆಪಿ ತಟ್ಟೆ ಸರಿ ಮಾಡಿಕೊಂಡು ಆಮೇಲೆ ನಮ್ಮ ತಟ್ಟೆಗೆ ಬರಲಿ ಎಂದು ಕಿಡಿಕಾರಿದರು.