Mysore
34
scattered clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಸರ್ಕಾರ ರಾಜ್ಯವನ್ನು ಲೂಟಿ ಮಾಡಲು ಮತ್ತೊಂದು ಅಡ್ಡದಾರಿ ಹಿಡಿದಿದೆ: ಆರ್.ಅಶೋಕ್‌

ಬೆಂಗಳೂರು: ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲು ಪಾಲಾಗಿ, ಅಧಿಕಾರ ಕಳೆದುಕೊಳ್ಳಲು ಕಾರಣವಾದ ಬಹುಕೋಟಿ ಲಿಕ್ವರ್‌ ಹಗರಣದ ಮಾದರಿಯಲ್ಲೇ ಕರ್ನಾಟಕದಲ್ಲೂ ಅಬಕಾರಿ ಹಗರಣವೊಂದು ಸಂಭವಿಸುವ ಮುನ್ಸೂಚನೆ ಕಾಣುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.‌ಅಶೋಕ್‌ ಹೊಸ ಬಾಂಬ್‌ ಸಿಡಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣವಾದ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಆರ್.‌ಅಶೋಕ್‌ ಅವರು, ಅಸ್ತಿತ್ವದಲ್ಲೇ ಇಲ್ಲದ ಮದ್ಯದ ಅಂಗಡಿಗಳನ್ನು ಕಾನೂನು ಬಾಹಿರವಾಗಿ ಹರಾಜು ಹಾಕಲು ಮುಂದಾಗಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ರಾಜ್ಯವನ್ನ ಲೂಟಿ ಮಾಡಲು ಮತ್ತೊಂದು ಅಡ್ಡದಾರಿ ಹಿಡಿಯಲು ಹೊರಟಿದೆ.

ಮುಡಾ ಹಗರಣದಿಂದ ಬಚಾವಾಗಲು, ಅಧಿಕಾರ ಹಂಚಿಕೆಯ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ರಣತಂತ್ರ ಹಣೆಯುವಲ್ಲಿ ಸಂಪೂರ್ಣವಾಗಿ ಬ್ಯುಸಿ ಆಗಿರುವ ಸಿಎಂ ಸಿದ್ದರಾಮಯ್ಯನವರಿಗೆ ಪಾಪ ಮೂರು ತಿಂಗಳಿನಿಂದ ಅನ್ನಭಾಗ್ಯದ ಹಣ, ಗೃಹಲಕ್ಷ್ಮಿ ಹಣ ಪಾವತಿ ಬಾಕಿ ಇರುವುದೇ ಗೊತ್ತಿಲ್ಲವಂತೆ.

ತಮಗೆ ಗೊತ್ತಿಲ್ಲದೆ ತಮ್ಮ ಸರ್ಕಾರದಲ್ಲಿ ಇನ್ನೂ ಏನೇನು ಕರ್ಮಕಾಂಡ ನಡೆಯುತ್ತಿದೆಯೋ ಆ ಪರಮಾತ್ಮನಿಗೆ ಗೊತ್ತು. ತಮಗೆ ಗೊತ್ತಿಲ್ಲದೆ ಯಾವ್ಯಾವ ಮಂತ್ರಿಗಳು, ಯಾವ್ಯಾವ ಶಾಸಕರು ಅದೆಷ್ಟು ಲೂಟಿ ಹೊಡೆಯುತ್ತಿದ್ದಾರೋ ಆ ದೇವರೇ ಬಲ್ಲ.

ಕರ್ನಾಟಕ ಕಂಡ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುವುದಕ್ಕಿಂತ ಈಗಲಾದರೂ ರಾಜೀನಾಮೆ ಕೊಟ್ಟು ಗೌರವದಿಂದ ನಿರ್ಗಮಿಸಿ. ತಾವು ಕುರ್ಚಿಗೆ ಅಂಟಿಕೊಂಡು ಕೂತಷ್ಟೂ ತಮ್ಮ ಗೌರವ ಹಾಗೂ ವರ್ಚಸ್ಸು ಮತ್ತಷ್ಟು ಕಡಿಮೆ ಆಗುವುದಂತೂ ಗ್ಯಾರಂಟಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಲೇವಡಿ ಮಾಡಿದ್ದಾರೆ.

Tags: