ಬೆಂಗಳೂರು: ಭತ್ತ ಮತ್ತು ತೊಗರಿ ಖರೀದಿ ಕೇಂದ್ರಗಳನ್ನು ತೆರೆದು ರೈತರಿಗೆ ನೆರವಾಗಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು, ಸರ್ಕಾರ ಕೂಡಲೇ ಈ ಕ್ರಮ ಕೈಗೊಳ್ಳದಿದ್ದರೆ ರೈತ ಸಂಪರ್ಕ ಕೇಂದ್ರಗಳಿಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಭತ್ತ ಮತ್ತು ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ಹಲವಾರು ಬಾರಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದರೂ ಅತ್ತ ಗಮನ ಹರಿಸದ ಕಾಂಗ್ರೆಸ್ ಸರ್ಕಾರ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಇನ್ನು 24 ಗಂಟೆಯೊಳಗೆ ಭತ್ತ ಮತ್ತು ತೊಗರಿ ಖರೀದಿ ಕೇಂದ್ರಗಳನ್ನು ತೆರೆದು, ಖರೀದಿ ಆರಂಭಿಸದಿದ್ದರೆ ರೈತ ಸಂಪರ್ಕ ಕೇಂದ್ರಗಳಿಗೆ ಬೀಗ ಜಡಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿನ್ನರ್ ಸಭೆಗಳು, ಔತಣಕೂಟಗಳು, ರಾಜಕೀಯ ಮೇಲಾಟಗಳಲ್ಲೇ ನಿರತರಾಗಿದ್ದಾರೆ. ಈ ಕೆಲಸಗಳು ಮುಗಿದಿದ್ದರೆ ಸ್ವಲ್ಪ ರೈತರ ಸಮಸ್ಯೆಗಳತ್ತ ಗಮನ ಹರಿಸುವ ದೊಡ್ಡ ಮನಸ್ಸು ಮಾಡಬೇಕು. ಬಿಡುವು ಇಲ್ಲದಿದ್ದರೆ ಕನಿಷ್ಟ ಪಕ್ಷ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗಾದರೂ, ಅವರು ಕೃಷಿ ಸಚಿವರು ಎಂಬುದನ್ನು ಒಮ್ಮೆ ನೆನಪು ಮಾಡಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು, ರಾಜ್ಯ ಸಚಿವರು ತಮ್ಮ ತಮ್ಮ ಅಭಿವೃದ್ಧಿ ಮಾಡಿಕೊಳ್ಳುತ್ತಾ ಬಂದಿದ್ದಾರೆ. ರಾಜ್ಯದಲ್ಲಿ ರೈತರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಅನ್ನದಾತರ ಬಗ್ಗೆ ಯಾರೂ ಕೂಡ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.