ಬೆಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದ ಭಾವನೆಗಳಿಗೆ ಧಕ್ಕೆಯಾಗಿರುವ ಹಿನ್ನೆಲೆಯಲ್ಲಿ ಪಿತೂರಿ ನಡೆಸಿರುವವರನ್ನು ಪತ್ತೆ ಹಚ್ಚಲು ರಾಜ್ಯ ಸರ್ಕಾರ ತಕ್ಷಣವೇ ರಾಷ್ಟ್ರೀಯ ತನಿಖಾದಳ(ಎನ್‍ಐಎ)ಕ್ಕೆ ವಹಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ಈ ಪ್ರಕರಣದ ಹಿಂದೆ ಅಂತಾರಾಷ್ಟ್ರೀಯ ಕೈವಾಡ ಇರುವುದನ್ನು ಅಲ್ಲಗೆಳೆಯುವಂತಿಲ್ಲ. ವ್ಯವಸ್ಥಿತವಾದ ಪಿತೂರಿ ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಎನ್‍ಐಎಗೆ ಇಲ್ಲವೇ ಸಿಬಿಐಗೆ ವಹಿಸಬೇಕು. ಎಸ್‍ಐಟಿಯಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ಹೇಳಿದರು.
ಈ ಕುರಿತು ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ಸಿಬಿಐ ಇಲ್ಲವೇ ಎನ್‍ಐಎಗೆ ವಹಿಸಬೇಕೆಂಬುದು ಕೇವಲ ಬಿಜೆಪಿ ಒತ್ತಾಯವಲ್ಲ. ಸಮಸ್ತ ಹಿಂದೂಗಳ ಬೇಡಿಕೆಯೂ ಆಗಿದೆ. ಕೂಡಲೇ ವಿಳಂಬ ಮಾಡದೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಧರ್ಮಸ್ಥಳದಲ್ಲಿ ಎನ್‍ಐಎ ತನಿಖೆ ಆಗಬೇಕು ಎಂಬುದು ಸಮಸ್ತ ಹಿಂದೂಗಳ ನಿಲುವಾಗಿದೆ. ಯಾಕೆಂದರೆ ಅಲ್ಲಿ ಹಿಂದೂ ಕೇಂದ್ರದ ವಿರುದ್ಧ ಷಡ್ಯಂತ್ರ ಆಗುತ್ತಿದೆ. ಹಿಂದೂ ಪರಂಪರೆಗೆ ಧಕ್ಕೆಯಾಗುವ ಯಾವುದೇ ನಿರ್ಧಾರ ಸರ್ಕಾರ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದರು.
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುವವರ ವಿರುದ್ಧ ಯಾಕೆ ಎಫ್‍ಐಆರ್ ಹಾಕಲಿಲ್ಲ? ಈ ವಿಚಾರದಲ್ಲಿ ಇನ್ನೂ ಎಷ್ಟು ದಿನ ಹುಚ್ಚಾಟ ಮುಂದುವರಿಸಿಕೊಂಡು ಹೋಗುತ್ತೀರಿ? ಎನ್‍ಐಎ ಅಥವಾ ಸಿಬಿಐ ತನಿಖೆಯಾದರೆ ತಪ್ಪೇನಿಲ್ಲ ಎಂದು ಅಭಿಪ್ರಾಯಪಟ್ಟರು.
ಮೈಸೂರಿನ ಚಾಮುಂಡಿ ಬೆಟ್ಟ ಎಲ್ಲರಿಗೂ ಸೇರಿದ್ದು ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ಖಂಡಿಸಿದ ವಿಜಯೇಂದ್ರ ಕೂಡಲೇ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಗಾಂಧಿ ಕುಟುಂಬಕ್ಕೆ ಖುಷಿಪಡಿಸಲು ಈ ರೀತಿಯ ಹೇಳಿಕೆ ಕೊಟ್ಟಿದ್ದಾರೆ. ಹಿಂದೂಗಳಿಗೆ ಅಪಮಾನ ಮಾಡಿರುವುದರಿಂದ ಈ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಆಕ್ಷೇಪಿಸಿದರು.
ಏನಾದರೂ ಹೇಳಿ ಹಿಂದೂಗಳಿಗೆ ಅಪಮಾನ ಮಾಡುತ್ತೀರಿ ಎಂದರೆ ಭಗವಂತ ಮೆಚ್ಚುವುದಿಲ್ಲ. ದೆಹಲಿಯಿಂದ ಒತ್ತಡ ಬಂದಿದ್ದಕ್ಕೆ ನಮಸ್ತೆ ಸದಾ ವತ್ಸಲೆ ಗೀತೆ ಹಾಡಿದ್ದಕ್ಕೆ ಕ್ಷಮೆ ಕೇಳಿದರು. ಇದು ಕಾಂಗ್ರೆಸ್‍ನ ಒಡೆದಾಳುವ ನೀತಿ ಎಂದು ಟೀಕಿಸಿದರು.
ಧರ್ಮಸ್ಥಳ ವಿಚಾರದಲ್ಲಿ ಅಷ್ಟೊಂದು ಅಪಪ್ರಚಾರ ನಡೆಯುತ್ತಿದ್ದರೂ ಸುಮ್ಮನಿದ್ದಾರೆ. ಪದೇ ಪದೇ ಹಿಂದೂಗಳ ಭಾವನೆಗಳಿಗೆ ಕಾಂಗ್ರೆಸ್‍ನವರು ಧಕ್ಕೆ ತರುತ್ತಿದ್ದಾರೆ. ತಕ್ಷಣ ಡಿಕೆಶಿ ಅವರು ತಮ್ಮ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.
ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಕ್ ಅವರನ್ನು ಆಹ್ವಾನಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಬಾನು ಮುಷ್ತಾಕ್ ಜೊತೆ ದೀಪಾ ಬಸ್ತಿಗೂ ಬೂಕರ್ ಪ್ರಶಸ್ತಿ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾನು ಮುಷ್ತಾಕ್ ಅವರಿಗೆ ಮಾತ್ರ ಕರೆದು ದೀಪಾ ಬಸ್ತಿಯವರನ್ನು ಕರೆದಿಲ್ಲ. ದೀಪಾ ಬಸ್ತಿ ಅವರನ್ನೂ ಸಿಎಂ ಕರೆಯಬೇಕಿತ್ತು. ಹಾಗಾದರೆ ಸಿಎಂ ಅವರ ಅಜೆಂಡಾ ಏನು? ಎಂದು ಪ್ರಶ್ನಿಸಿದರು.
ದೀಪಾ ಬಸ್ತಿ ಅವರನ್ನು ಯಾಕೆ ಆಹ್ವಾನ ಕೊಡಲು ಸಾಧ್ಯವಾಗಲಿಲ್ಲ ಎಂಬುದಕ್ಕೆ ಸಿಎಂ, ಡಿಸಿಎಂ ಕೂಡ ಸ್ಪಷ್ಟಪಡಿಸಬೇಕು. ಬಾನು ಮುಷ್ತಾಕ್ ಅವರನ್ನು ಮಾತ್ರ ಕರೆದ ಹಿಂದೆ ಉದ್ದೇಶ ಇದೆಯೋ? ದುರುದ್ದೇಶ ಇದೆಯೋ?, ಸಿಎಂ ಅವರು ಬಾನು ಮುಷ್ತಾಕ್ ಆಯ್ಕೆ ಯಾಕೆಂದು ಸಿಎಂ ಸ್ಪಷ್ಟ ಪಡಿಸಬೇಕು. ಒಬ್ಬರನ್ನೇ ಕರೆಯಬೇಕೆಂಬ ಆಲೋಚನೆ ಬಂದಿದ್ದು ಯಾಕೆ ಎಂದು ವಿಜಯೇಂದ್ರ ಪ್ರಶ್ನಿಸಿದರು.





