ಬೆಂಗಳೂರು : ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಗೆ ರಾಷ್ಟ್ರೀಯ ನಾಯಕರು ಶೀಘ್ರವೇ ಇತೀಶ್ರಿ ಹಾಡಬೇಕು. ಇಲ್ಲವಾದರೆ ಕಾಂಗ್ರೆಸ್ ಪಕ್ಷಕ್ಕೆ ಹಾನಿಯಾಗಲಿದೆ ಎಂದು ಆಡಳಿತ ಪಕ್ಷದ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವುದಾಗಿ, ಸಿದ್ದರಾಮಯ್ಯ ಮಾತು ಕೊಟ್ಟಿದ್ದಾರೋ?, ಇಲ್ಲವೋ? ತಮಗೆ ಗೊತ್ತಿಲ್ಲ. ಅದು ನಮ್ಮವರೆಗೂ ಚರ್ಚೆಯಾಗುವ ವಿಷಯವಲ್ಲ ಎಂದರು.
ದಿಲ್ಲಿಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ರಾಷ್ಟ್ರೀಯ ನಾಯಕರ ನಡುವೆ ನಡೆದ ಚರ್ಚೆ. ನಮಗೆ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದರು.
ಇದನ್ನು ಓದಿ: ಮೈಸೂರಿನಲ್ಲಿ ಸುಸಜ್ಜಿತ ಪೊಲೀಸ್ ಮ್ಯೂಸಿಯಂ ಸ್ಥಾಪನೆ : ಗೃಹ ಸಚಿವ ಪರಮೇಶ್ವರ
ಸಚಿವ ಸಂಪುಟಕ್ಕೆ ಸೇರಲು ತಾವೂ ಕೂಡ ಆಕಾಂಕ್ಷಿ. ರಾಜಕಾರಣಿಗಳು ಸನ್ಯಾಸಿಗಳಲ್ಲ ಶಾಸಕರಾಗಬೇಕು, ಸಚಿವರಾಗಬೇಕು, ಒಳ್ಳೆಯ ಖಾತೆ ಬೇಕು ಎಂಬೆಲ್ಲಾ ಆಸೆಗಳಿರುತ್ತವೆ. ಹಂತ ಹಂತವಾಗಿ ಮೇಲೇರಬೇಕು ಎಂಬ ಆಸೆಗೆ ಮಿತಿ ಇರುವುದಿಲ್ಲ ಎಂದು ಹೇಳಿದರು.
ಪ್ರಸ್ತುತ ರಾಜಕಾರಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರೇ ಅಧಿಕಾರ ಬಿಟ್ಟುಕೊಡಲು ಇಚ್ಚಿಸುವುದಿಲ್ಲ. ಇನ್ನೂ ಮಂತ್ರಿಗಳು ಸ್ಥಾನ ಬಿಟ್ಟುಕೊಡುತ್ತಾರೆಯೇ ಎಂದ ಅವರು ತಮಗೆ ಸಚಿವ ಸ್ಥಾನದ ಬಗ್ಗೆ ಸಂದರ್ಭ ಬಂದಾಗ ಚರ್ಚೆ ಮಾಡುತ್ತೇನೆ ಎಂದರು.
ರಾಜಕೀಯಕ್ಕೆ ಸಂಬಂಧಪಟ್ಟಂತೆ ತಾವಾಗಲೀ, ತಮ್ಮ ಬೆಂಬಲಿಗರಾಗಲೀ ದಿಲ್ಲಿ ಸೇರಿದಂತೆ ಎಲ್ಲಿಗೂ ಹೋಗುವುದಿಲ್ಲ. ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ ಎಂದು ಸ್ಪಷ್ಟ ಪಡಿಸಿದರು.
ಪ್ರಸ್ತುತ ರಾಜಕೀಯ ಗೊಂದಲಗಳ ಹಿನ್ನೆಲೆಯಲ್ಲಿ ಶಾಸಕರನ್ನು ಸೆಳೆಯಲು ನೂರು ಕೋಟಿ ರೂಪಾಯಿಗಳ ಆಫರ್ ನೀಡಲಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಲಕ್ಷ್ಮಣ ಸವದಿ, ೨೦೧೯ ರಲ್ಲಿ ತಾವು ಮಾಡಿದನ್ನು ಬಿಜೆಪಿಯ ನಾಯಕರು ಸ್ಮರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಮೆಲುಕು ಹಾಕುತ್ತಿರಬಹುದು ಎಂದು ಲೇವಡಿ ಮಾಡಿದರು.





