Mysore
22
haze

Social Media

ಗುರುವಾರ, 11 ಡಿಸೆಂಬರ್ 2025
Light
Dark

ದ್ವೇಷ ಭಾಷಣಕ್ಕೆ ಕಡಿವಾಣ | ಗರಿಷ್ಟ 10 ವರ್ಷ ಶಿಕ್ಷೆ, ವಿಧಾನಸಭೆಯಲ್ಲಿ ಮಸೂದೆ ಮಂಡನೆ, BJP ವಿರೋಧ 

ಬೆಳಗಾವಿ : ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದು, ಈ ಸಂಬಂಧ ಬುಧವಾರ ವಿಧಾನಸಭೆಯಲ್ಲಿ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ ಮಂಡನೆ ಮಾಡಲಾಗಿದೆ.

ದ್ವೇಷ ಭಾಷಣ ಮತ್ತು ಅಪರಾಧ ಎಸಗುವವರಿಗೆ ಕನಿಷ್ಠ ೧ರಿಂದ ೧೦ ವರ್ಷಗಳವರೆಗೆ ಕಾರಾಗೃಹ ಶಿಕ್ಷೆ, ಕನಿಷ್ಠ ೫೦ ಸಾವಿರದಿಂದ ಒಂದು ಲಕ್ಷ ರೂ. ಜುಲ್ಮಾನೆ ವಿಧಿಸುವ ಕಠಿಣ ಕಾನೂನನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನೋತ್ತರದ ಬಳಿಕ ವಿಧಾನಸಭೆಯಲ್ಲಿ ೨೦೨೫ ನೇ ಸಾಲಿನ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮತ್ತು ನಿಯಂತ್ರಣ ವಿಧೇಯಕವನ್ನು ಮಂಡಿಸಿದರು.

ಇದಕ್ಕೆ ವಿರೋಧ ಪಕ್ಷಗಳು ಪ್ರಬಲ ವಿರೋಧ, ಆಕ್ಷೇಪ ವ್ಯಕ್ತಪಡಿಸಿದವು. ವಿಧೇಯಕ ಮಂಡನೆ ದ್ವೇಷದ ರಾಜಕಾರಣದಿಂದ ಕೂಡಿದೆ. ಕಾಯ್ದೆ ಮಂಡನೆಗೆ ಅವಕಾಶ ನೀಡಬಾರದು ಎಂದು ಪಟ್ಟು ಹಿಡಿದರು. ವಿರೋಧದ ನಡುವೆಯೂ ಸಭಾಧ್ಯಕ್ಷ ಯು.ಟಿ.ಖಾದರ್ ವಿಧೇಯಕ ಮಂಡನೆಗೆ ಅವಕಾಶ ಕಲ್ಪಿಸಿದರು. ಮಂಡನೆಯಾಗಿರುವ ವಿಧೇಯಕದಲ್ಲಿ ದ್ವೇಷ ಭಾಷಣದ ಪ್ರಸರಣೆ, ಪ್ರಕಟಣೆ ಅಥವಾ ಪ್ರಚಾರವನ್ನು ನಿರ್ಬಂಧಿಸಲಾಗಿದೆ. ಸಮಾಜದಲ್ಲಿ ನಿರ್ದಿಷ್ಟ ವ್ಯಕ್ತಿ, ಸಮೂಹ, ಸಂಸ್ಥೆಗಳ ವಿರುದ್ಧ ಅಸಾಮರಸ್ಯ, ದ್ವೇಷ ಹುಟ್ಟಿಸುವಂತಹ ಅಪರಾಧಗಳನ್ನು ಪ್ರತಿಬಂಧಿಸಲು ಮತ್ತು ತಡೆಗಟ್ಟಲು ಈ ವಿಧೇಯಕವನ್ನು ರೂಪಿಸಿರುವುದಾಗಿ ತಿಳಿಸಲಾಗಿದೆ. ತಪ್ಪಿತಸ್ಥರಿಗೆ ದಂಡನೆ ವಿಧಿಸುವ ಜೊತೆಗೆ ಹಾನಿಗೊಳಗಾದ ಸಂತ್ರಸ್ತರಿಗೆ ತಕ್ಕ ಪರಿಹಾರ ಒದಗಿಸುವುದು ವಿಧೇಯಕದಲ್ಲಿ ಅಡಕವಾಗಿದೆ.

ಯಾವುದೇ ಪೂರ್ವ ಕಲ್ಪಿತ ಹಿತಾಸಕ್ತಿಯನ್ನು ಸಾಧಿಸಲು ಬದುಕಿರುವ ವ್ಯಕ್ತಿ, ಮೃತ ವ್ಯಕ್ತಿಗಳು, ವರ್ಗ, ಗುಂಪು, ಸಮುದಾಯದ ವಿರುದ್ಧ ಹಾನಿ, ಅಸಾಮರಸ್ಯ, ವೈರತ್ವ, ದ್ವೇಷ ಹಾಗೂ ಕೆಡುಕಿನ ಭಾವನೆಗಳನ್ನು ಮೂಡಿಸುವ ಉದ್ದೇಶವನ್ನು ಅಪರಾಧ ಎಂದು ಪರಿಭಾವಿಸಲಾಗಿದೆ. ಸಾರ್ವಜನಿಕ ನೋಟದಲ್ಲಿ, ಮೌಖಿಕ ಅಥವಾ ಲಿಖಿತ ರೂಪದ ಪದಗಳಲ್ಲಿ, ಸಂಕೇತಗಳ ಮೂಲಕ, ದೃಶ್ಯರೂಪಕಗಳ ಮೂಲಕ, ವಿದ್ಯುನ್ಮಾನ ಸಂವಹನಗಳ ಮೂಲಕ ಅಥವಾ ಇನ್ಯಾವುದೇ ರೀತಿಯಲ್ಲಿ ಕಂಡುಬರುವ ಅಪರಾಧಗಳನ್ನು ಪರಿಗಣಿಸುವುದಾಗಿ ತಿಳಿಸಲಾಗಿದೆ.

ಧರ್ಮ, ಜನಾಂಗ, ಜಾತಿ, ಸಮುದಾಯ, ಲಿಂಗತ್ವ, ಲೈಂಗಿಕ ಮನೋಗುಣ, ಜನ್ಮಸ್ಥಳ, ವಾಸಸ್ಥಳ, ಭಾಷೆ, ನ್ಯೂನತೆ ಅಥವಾ ಪಂಗಡಗಳ ಪೂರ್ವಕಲ್ಪಿತ ಹಿತಾಸಕ್ತಿಯನ್ನು ಪೂರ್ವಗ್ರಹದಿಂದ ದ್ವೇಷಿಸುವುದು ಅಥವಾ ನಿಂದಿಸುವುದನ್ನು ಅಪರಾಧ ಎಂದು ಪರಿಭಾವಿಸಲಾಗಿದೆ. ದ್ವೇಷ ಭಾಷಣವನ್ನು ಪ್ರಚುರಪಡಿಸುವ, ಮಾತನಾಡುವ ಅಥವಾ ಪ್ರಚೋದಿಸುವ ಮೂಲಕ ದುಷ್ಪರಿಣಾಮ ಉಂಟುಮಾಡುವಂತಹ ಅಪರಾಧಗಳನ್ನು ಶಿಕ್ಷಾರ್ಹ ಎಂದು ಗುರುತಿಸಲಾಗಿದೆ.

Tags:
error: Content is protected !!