ಬೆಂಗಳೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸದಾಶಿವನಗರದಲ್ಲಿ ಮಾಧ್ಯಮಗಳ ಜತೆ ಮಾತನಾಡಿ ಔಷಧಿ ಕೇಂದ್ರಗಳಲ್ಲೂ ಸಿಂಥೆಟಿಕ್ ಡ್ರಗ್ಸ್ ಪತ್ತೆಯಾಗುತ್ತಿದೆ ಎಂಬ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ,ಈ ವರ್ಷ ಡ್ರಗ್ಸ್ ಮಾರಾಟ ಕಡಿಮೆಯಾಗಿದೆ. ಆದರೂ ಮೆಡಿಕಲ್‌ಗಳಲ್ಲಿಯೂ ಸಹ ಸಿಂಥೇಟಿಕ್ ಡ್ರಗ್ಸ್ ದೊರೆಯುತ್ತಿದೆ ಎಂಬ ಸುದ್ದಿ ನನಗೆ ಆಶ್ಚರ್ಯವಾಗುವಂತೆ ಮಾಡಿದೆ. ಈಗಾಗಲೇ ಕರ್ನಾಟಕದಲ್ಲಿ ಡ್ರಗ್ಸ್ ದಂಧೆ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳೊಡನೆ ಸಮಾಲೋಚನೆ ನಡೆಸಲಾಗುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಡ್ರಗ್ಸ್ ದಂಧೆಗೆ ಯಾವ ರೀತಿ ಕಡಿವಾಣ ಹಾಕಬೇಕು ಎಂಬ ವಿಚಾರದ ಬಗ್ಗೆ ಇಂದು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಪರಮೇಶ್ವರ್ ಹೇಳಿದ್ದಾರೆ.
ರಾಜ್ಯದಲ್ಲಿ ಇತರೆ ಡ್ರಗ್ಸ್ ನಿಯಂತ್ರಣ ಹಾಗೂ ಗಾಂಜಾದ ಪ್ರಕರಣಗಳು ಕಡಿಮೆ ಆಗಿವೆ. ಈ ಮಧ್ಯೆ ಮೆಡಿಕಲ್ ಸ್ಟೋರ್‌ಗಳಲ್ಲಿ ಡ್ರಗ್ಸ್‌ಗೆ ಔಷಧ ಎಂದು ಹೇಳಿ ಮಾರಾಟ ಮಾಡಲಾಗುತ್ತಿದೆ. ಡ್ರಗ್ಸ್ ಮಾರಾಟಕ್ಕೆ ಔಷಧ ಕೇಂದ್ರಗಳಲ್ಲಿ ಕಾನೂನು ಬೇರೆ ರೀತಿ ಆಗುತ್ತದೆ. ಹೀಗಾಗಿ ಮೆಡಿಕಲ್ ಸ್ಟೋರ್‌ಗಳಲ್ಲಿ ಡ್ರಗ್ಸ್ ಮಾರಾಟದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಡನೆ ಚರ್ಚೆ ಮಾಡುತ್ತೇವೆ ಎಂದೂ ಸಹ ಇದೇ ವೇಳೆ ತಿಳಿಸಿದ್ದಾರೆ.