Mysore
28
few clouds

Social Media

ಬುಧವಾರ, 21 ಜನವರಿ 2026
Light
Dark

ಲಂಚ ಪಡೆದು ಅಕ್ರಮ ಎಸಗಿದ ಮೂವರು ವೈದ್ಯರ ಅಮಾನತು

Corruption

ಬೆಂಗಳೂರು : ಭಾರತೀಯ ವೈದ್ಯಕೀಯ ಆಯೋಗದ ಪರಿವೀಕ್ಷಕರ ತಂಡದಲ್ಲಿ ನಿಯೋಜಿತರಾಗಿ ವೈದ್ಯಕೀಯ ಸಂಸ್ಥೆಗೆ ಅನುಕೂಲಕರವಾದ ತಪಾಸಣಾ ವರದಿ ನೀಡಲು ಲಂಚ ಸ್ವೀಕರಿಸಿದ ಆರೋಪದ ಮೇರೆಗೆ ಮೂವರು ವೈದ್ಯರನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ.

ಬೆಂಗಳೂರು ಅಟಲ್ ಬಿಹಾರಿ ವಾಜಪೇಯಿ, ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶರೀರ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಚೈತ್ರ ಎಂ.ಎಸ್, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೂಳೆ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಮಂಜಪ್ಪ ಸಿ.ಎನ್, ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಮುದಾಯ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅಶೋಕ್ ಸೆಲ್ಕೆ ಅವರನ್ನು ಅಮಾನತುಗೊಳಿಸಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ಮೊಸೀನ್ ಆದೇಶ ಹೊರಡಿಸಿದ್ದಾರೆ.

‌ಲಂಚ ಸ್ವೀಕಾರ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಸಿಬಿಐ ಈಗಾಗಲೇ ಎಫ್‌ಐಆರ್‌ ದಾಖಲಿಸಿದೆ ಎಂದು ವರದಿ ಮಾಡಿದೆ. ಈ ಕುರಿತು ಸಿಬಿಐ ಇಲಾಖೆಗೆ ಈ-ಮೇಲ್‌ ಮೂಲಕ ಮಾಹಿತಿ ರವಾನಿಸಿದೆ.

ಈ ಹಿನ್ನೆಲೆಯಲ್ಲಿ ಈ ಮೂವರ ಅಮಾನತಿಗೆ ಇಲಾಖೆಯ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಡಾ. ಚೈತ್ರ, ಡಾ. ಮಂಜಪ್ಪ, ಡಾ. ಅಶೋಕ್‌ ಶೆಲ್ಕೆ ಅವರು ಛತ್ತೀಸ್‌ಗಡ ರವತ್‌ಪುರ ಸರ್ಕಾರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕ್‌ ಸೈನ್ಸ್‌ ಅಂಡ್‌ ರೀಸರ್ಚ್‌ ಸಂಸ್ಥೆಗೆ ಅನುಕೂಲಕರವಾದ ತಪಾಸಣಾ ವರದಿಯನ್ನು ನೀಡುವ ಸಂಬಂಧ ಲಂಚ ಪಡೆದಿರುತ್ತಾರೆ. ಇವರನ್ನು ಸಿಬಿಐ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಎಲ್ಲ ವಿಷಯಗಳನ್ನು ಕೂಲಂಕಶವಾಗಿ ಪರಿಶೀಲಿಸಿದ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಮೂವರು ವೈದ್ಯರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Tags:
error: Content is protected !!