ಉಡುಪಿ: ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮುಂದೆ ನಕ್ಸಲರು ಶರಣಾಗುವುದು ಕಾನೂನು ರೀತಿಯ ಕ್ರಮ. ಆದರೆ ಸಿಎಂ ಮುಂದೆ ನಕ್ಸಲರು ಶರಣಾಗಿರುವುದನ್ನು ನೋಡಿದರೆ ಹಲವು ಸಂಶಯಗಳು ಮೂಡುತ್ತಿವೆ ಎಂದು ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ.
ಈ ಬಗ್ಗೆ ಉಡುಪಿ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎನ್‌ಕೌಂಟರ್ ಶುರು ಮಾಡಿದ ಬಳಿಕ ಸರ್ಕಾರವು ನಕ್ಸಲರನ್ನು ಶರಣಾಗತಿ ಮಾಡಿಸುತ್ತಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದರು.
ನಕ್ಸಲರ ಶರಣಾಗತಿ ಮತ್ತು ಪುನರ್ವಸತಿ ನೀತಿ ರಾಜ್ಯದಲ್ಲಿದೆ. ನಕ್ಸಲರೇ ತಮ್ಮ ಕಾರ್ಯ ಚಟುವಟಿಕೆಗಳನ್ನು ಬಿಟ್ಟು, ಸಹಜ ಬದುಕಿಗೆ ಮರಳಲು ನಿರ್ಧಾರ ಮಾಡಿದರೆ ಅವರಿಗೆ ದಾರಿ ಮಾಡಿಕೊಡುವುದು ಈ ಕಾನೂನಿನ ಮೂಲ ಉದ್ದೇಶವಾಗಿದೆ.
ಆದರೆ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರವು ನಕ್ಸಲರಿಗೆ ಶರಣಾಗತಿ ಪ್ರಕ್ರಿಯೆಗಳನ್ನು ಸುಲಭ ಮಾಡಿಕೊಟ್ಟಂತೆ ಕಾಣುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.