Mysore
20
overcast clouds
Light
Dark

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ: ಜನಾರ್ದನ ರೆಡ್ಡಿ

ಗಂಗಾವತಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಜೊತೆಗೆ ತಮ್ಮ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಪಕ್ಷವು ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧವಿದೆ ಎಂದು ಕೆಆರ್‌ಪಿಪಿ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಘರ್ ವಾಪ್ಸಿ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಹೊಸ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಈ ಮೊದಲು ಬಿಜೆಪಿಯಲ್ಲಿದ್ದು ಆನಂತರ ಪಕ್ಷದಿಂದ ದೂರಾಗಿರುವ ಪ್ರಬಲ ನಾಯಕರನ್ನು ಪುನಃ ಬಿಜೆಪಿಯತ್ತ ಸೆಳೆಯುವ ಪ್ರಯತ್ನದ ಬೆನ್ನಲ್ಲೇ ಜನಾರ್ದನ ರೆಡ್ಡಿಯ ಈ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ.

ನಿನ್ನೆ (ಜ. 27) ಕೊಪ್ಪಳದಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಶತಮಾನಗಳ ಹೋರಾಟದ ನಂತರ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಎಲ್ಲಾ ನಾಗರಿಕರ ಕನಸನ್ನು ನನಸು ಮಾಡಿದ್ದಾರೆ. ಹಾಗಾಗಿ, ಮತ್ತೊಮ್ಮೆ ಮೋದಿಯವರು ಈ ದೇಶದ ಪ್ರಧಾನಿಯಾಗಬೇಕು. ಲೋಕಸಭೆ ಚುನಾವಣೆಯಲ್ಲಿ ಕೆಆರ್‌ಪಿಪಿ ಕೂಡ ಸ್ಪರ್ಧಿಸಲಿದೆ. ಅಂದಾಜು ನಾಲ್ಕೈದು ಕ್ಷೇತ್ರಗಳಲ್ಲಿ ನಾವು ನಮ್ಮ ಅಭ್ಯರ್ಥಿಗಳನ್ನು ಹಾಕುತ್ತೇನೆ. ನಮ್ಮ ಅಭ್ಯರ್ಥಿಗಳು ಗೆದ್ದ ನಂತರ ನಾವು ಬಿಜೆಪಿಯನ್ನು ಬೆಂಬಲಿಸುತ್ತೇವೆ’’ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆಗೂ ಮುನ್ನವೇ ಜನಾರ್ದನ ರೆಡ್ಡಿಯವರನ್ನು ಬಿಜೆಪಿಗೆ ಸೆಳೆಯಬೇಕು. ಕೆಆರ್‌ಪಿಪಿ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಬೇಕು. ಕೊಪ್ಪಳ ಜಿಲ್ಲೆಯಲ್ಲಿ ಗಾಲಿ ಜನಾರ್ದನ ರೆಡ್ಡಿಯವರನ್ನೇ ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕು. ಅದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆಲವಾರು ಜಿಲ್ಲೆಗಳ ಮೇಲೆ ಬಿಜೆಪಿ ಪ್ರಭಾವ ಬೀರಬಹುದು ಎಂದು ಬಿಜೆಪಿ ಲೆಕ್ಕಾಚಾರ ಹಾಕಿದೆ.

ಕೆಆರ್‌ಪಿಪಿ ಪಕ್ಷದ ಮುಖಂಡ ಚಂದ್ರಶೇಖರಯ್ಯ ಎಂ.ಹಿರೇಮಠ ಅವರ ಮನೆಯಲ್ಲಿ ವಿದ್ಯುತ್‌ ಅವಘಡ ಸಂಭವಿಸಿದ ಹಿನ್ನೆಲೆ ಶಾಸಕ ಗಾಲಿ ಜನಾರ್ದನರೆಡ್ಡಿ ಭೇಟಿ ನೀಡಿ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಪಕ್ಷದ ಮುಖಂಡರ ಮನೆಯಲ್ಲಿ ವಿದ್ಯುತ್‌ ಅವಘಡ ಸಂಭವಿಸಿದ್ದು, ಕುಟುಂಬವನ್ನು ಭೇಟಿಯಾಗಿ ಧೈರ್ಯ ತುಂಬಿರುವೆ ಎಂದರು.

ಲೋಕ ಚುನಾವಣೆಗೆ ಸಂಬಂಧಿಸಿದಂತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೆಚ್ಚು ಸ್ಥಾನ ಗೆಲ್ಲಿಸಲು ಶ್ರಮಿಸುವೆ. ಕಾಂಗ್ರೆಸ್‌ ಜತೆಗೆ ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದು ತಮ್ಮ ನಿಲುವು ಹೇಳಿದರು.

ಕೆಆರ್‌ಪಿಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮನೋಹರಗೌಡ, ಜಿಲ್ಲಾಧ್ಯಕ್ಷ ಸಂಗಮೇಶ ಬಾದವಾಡಗಿ, ವೀರೇಶ ಕಲ್ಗುಡಿ, ಕೆ.ಶಶಿ ಸೇರಿದಂತೆ ಇತರರು ಜೊತೆಯಲ್ಲಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ