Mysore
22
few clouds

Social Media

ಸೋಮವಾರ, 17 ಫೆಬ್ರವರಿ 2025
Light
Dark

ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ಮನವಿ: ಸುನಿಲ್‌ ಕುಮಾರ್‌

ಬೆಂಗಳೂರು: ಬಿಜೆಪಿ ಪಕ್ಷದಲ್ಲಿ ಬಣ ಬಡಿದಾಟದ ಮಧ್ಯೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ಕಾರ್ಕಳ ಶಾಸಕ ವಿ.ಸುನೀಲ್‌ ಕುಮಾರ್‌ ಮನವಿ ಮಾಡಿದ್ದಾರೆ.

ರಾಜ್ಯ ಬಿಜೆಪಿ ಪಕ್ಷದಲ್ಲಿ ವಿಜಯೇಂದ್ರ ಹಾಗೂ ಶಾಸಕ ಯತ್ನಾಳ್‌ ನಡುವೆ ಬಣ ಬಡಿದಾಟ ಜೋರಾಗಿ ನಡೆಯುತ್ತಿದೆ. ಈ ನಡುವೆಯೇ ಸುನೀಲ್‌ ಕುಮಾರ್‌ ಅವರು ತಮ್ಮನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ಮನವಿ ಮಾಡಿರುವುದು ಕೂತುಹಲ ಮೂಡಿಸಿದೆ. ಸುನೀಲ್‌ ಈ ವಿಚಾರವಾಗಿ ಮೊದಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಪಕ್ಷದ ಹುದ್ದೆಯಿಂದ ತಮ್ಮನ್ನು ಬಿಡುಗಡೆಗೊಳಿಸಲು ಮೌಖಿಕವಾಗಿ ಮನವಿ ಮಾಡಿದ್ದರು ಎನ್ನಲಾಗಿದೆ. ಆದರೆ ಇದೀಗ ಅಧಿಕೃತವಾಗಿ ತಿಳಿಸಿದ್ದು, ಈ ನಿರ್ಧಾರ ನನ್ನ ವೈಯಕ್ತಿಕ ಕಾರಣವಾಗಿದ್ದು, ಪಕ್ಷದಲ್ಲಾಗುತ್ತಿರುವ ಬಣ ಬಡಿದಾಟವಲ್ಲ ಎಂದು ಹೇಳಿದ್ದಾರೆ.

ಬಿ.ವೈ.ವಿಜಯೇಂದ್ರ ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಮಾಹಿತಿ ನೀಡಿದ್ದಾರೆ. ಆದರೆ ಸುನೀಲ್‌ ಅವರ ಮನವಿಗೆ ಪಕ್ಷದಿಂದ ಯಾವುದೇ ರೀತಿಯ ತೀರ್ಮಾನವನ್ನು ಕೈಗೊಂಡಿಲ್ಲ. ಇನ್ನೂ ಕಳೆದ ಚುನಾವಣೆಯಲ್ಲಿ ಸುನೀಲ್‌ ರಾಜ್ಯ ಉಸ್ತುವಾರಿಯಾಗಿ ವಿಜಯೇಂದ್ರ ಅವರೊಂದಿಗೆ ಯಾವುದೇ ವಿವಾದವಿಲ್ಲದೆ ಕಾರ್ಯ ನಿರ್ವಹಿಸಿದ್ದರು. ಅಲ್ಲದೇ ಬಣ ಬಡಿದಾಟದಲ್ಲಿ ಯಾರ ಪರವಹಿಸದೇ ತಟಸ್ಥವಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಬಿಜೆಪಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸುನೀಲ್‌ ಕುಮಾರ್‌, ನಂದೀಶ್‌ ರೆಡ್ಡಿ, ಪ್ರೀತಮದದ ಗೌಡ ಹಾಗೂ ಪಿ.ರಾಜೀವ್‌ ಅವರನ್ನು ನೇಮಿಸಲಾಗಿತ್ತು.

Tags: