ಬೆಂಗಳೂರು: ಲೋನ್ ಕಟ್ಟಲು ತಡವಾಗಿದ್ದಕ್ಕೆ ಸಾಲ ಪಡೆದಿದ್ದ ದಂಪತಿಯ ಮಗುವನ್ನು ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕರೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಮೈಕ್ರೋ ಫೈನಾನ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಲೋನ್ ಕಟ್ಟಲು ತಡವಾಗಿದ್ದಕ್ಕೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮಗುವನ್ನು ಕರೆದೊಯ್ದಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದೆಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್‌ಗಳಿಗೆ ಕಡಿವಾಣ ಹಾಕಲು ಈಗಾಗಲೇ ಕಠಿಣ ಕಾನೂನು ತಂದಿದ್ದೇವೆ. ಆದರೂ ಕೆಲವೆಡೆ ಇಂತಹ ದುರ್ವರ್ತನೆ ನಡೆಯುತ್ತಿದೆ. ಇದು ಸರಿಯಲ್ಲ. ಮಗುವನ್ನು ಕರೆದೊಯ್ದವರು ಕಠಿಣ ಹೃದಯಿಗಳು. ಮಾನವೀಯತೆ ಇಲ್ಲದವರು ಮಗುವನ್ನು ಅಪಹರಣ ಮಾಡಿದ್ದಾರೆ. ಈ ಬಗ್ಗೆ ಇಂದು ಮೈಸೂರು ಪೊಲೀಸ್ ಕಮಿಷನರ್ ಅಥವಾ ಐಜಿ ಬಳಿ ಮಾತನಾಡುತ್ತೇನೆ. ಇದಕ್ಕೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.





