ಉಡುಪಿ: ಕಾರ್ಕಳದಲ್ಲಿ ನಡೆದಿರುವ ಯುವತಿಯ ಅಪಹರಣ ಹಾಗೂ ಆಕೆಯ ಮೇಲಿನ ಆತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ.
ಇದೊಂದು ಪೈಶಾಚಿಕ ಕೃತ್ಯವಾಗಿದ್ದು, ಈ ಪ್ರಕರಣ ಸಂಬಂಧ ಸಮಗ್ರ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗವುದು. ಈ ವಿಚಾರದಲ್ಲಿ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ದಿಟ್ಟ ತನದಿಂದ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಈ ಪ್ರಕರಣ ಸಂಬಂಧ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದ್ದು, ಎಲ್ಲಾ ಆಯಾಮಗಳಿಂದ ತನಿಖೆ ನಡೆಯುತ್ತಿದೆ. ಧರ್ಮ ಯಾವುದೇ ಆಗಿರಲಿ ತಪ್ಪಿತಸ್ಥರನ್ನು ಕಾನೂನು ಸುಮ್ಮನೇ ಬಿಡುವುದಿಲ್ಲ. ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.
ಇನ್ನು ಹಾನಿಗೊಳಗಾದ ಯುವತಿಗೆ ಮಾನಸಿಕವಾಗಿ ಧೈರ್ಯ ತುಂಬಿದ್ದು, ಜಿಲ್ಲಾಡಳಿತದಿಂದ ಎಲ್ಲಾ ಅಗತ್ಯ ನೆರವು ನೀಡಲಾಗುವುದು ಎಂದು ಸಚಿವೆ ಹೆಬ್ಬಾಳ್ಕರ್ ತಿಳಿಸಿದರು.