Mysore
29
few clouds

Social Media

ಮಂಗಳವಾರ, 27 ಜನವರಿ 2026
Light
Dark

ಹಂತ ಹಂತವಾಗಿ ಸಮೀಕ್ಷೆ ಚುರುಕಾಗಿದೆ: ಸಚಿವ ಶಿವರಾಜ್‌ ತಂಗಡಗಿ

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹಂತ ಹಂತವಾಗಿ ಚುರುಕುಗೊಳ್ಳುತ್ತಿದೆ. ಸರ್ವರ್ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಇಂದು ಸಂಜೆಯ ಒಳಗೆ ಇತ್ಯರ್ಥವಾಗಲಿವೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡನೇ ದಿನವಾದ ನಿನ್ನೆ 71 ಸಾವಿರ ಜನರ ಸಮೀಕ್ಷೆಯಾಗಿತ್ತು. ಇಂದು ಬೆಳಗ್ಗೆ ಮಾಹಿತಿ ತೆಗೆದುಕೊಂಡಾಗ ಎರಡು ಮೂರು ಗಂಟೆಯಲ್ಲೇ 1.93 ಲಕ್ಷ ಜನರ ಸಮೀಕ್ಷೆಯಾಗಿದೆ. ಪ್ರತಿ ದಿನ ಸರಾಸರಿ 10 ಲಕ್ಷ ಜನರ ಸಮೀಕ್ಷೆ ನಡೆಸುವ ಗುರಿಯಿದೆ ಎಂದು ಹೇಳಿದರು.

ಸರ್ವರ್‌ನಲ್ಲಿ ನಿಧಾನಗತಿಯ ಸಮಸ್ಯೆ ಇದ್ದು, ಅದನ್ನು ಸರಿಪಡಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಬಹುತೇಕ ಎಲ್ಲಾ ತೊಂದರೆಗಳು ನಿವಾರಣೆಯಾಗಲಿವೆ ಎಂದರು.
ಕಟ್ಟಕಡೆಯ ಮನುಷ್ಯನಿಗೂ ಸೌಲಭ್ಯ ಒದಗಿಸಬೇಕೆಂಬ ಉದ್ದೇಶದಿಂದ ಸರ್ಕಾರ ಸಮೀಕ್ಷೆ ಮಾಡುತ್ತಿದೆ. ಇದು ಜಾತಿ ಜನಗಣತಿ ಅಲ್ಲ. ಸಮೀಕ್ಷೆಗಾಗಿ ಸಿದ್ಧಪಡಿಸಿರುವ 60 ಪ್ರಶ್ನೆಗಳಲ್ಲಿ ಜಾತಿಯೂ ಒಂದು. ಉಳಿದ 59 ಪ್ರಶ್ನೆಗಳ ಬಗ್ಗೆ ಏಕೆ ಚರ್ಚೆಯಾಗುತ್ತಿಲ್ಲ? ಎಂದು ಅವರು ಮರು ಪ್ರಶ್ನಿಸಿದರು.

ಇದನ್ನು ಓದಿ : ಕೊಟ್ಟ ಅವಧಿಯಲ್ಲೇ ಸಮೀಕ್ಷೆ ಮುಗಿಯಲಿದೆ: ಸಚಿವ ಶಿವರಾಜ್‌ ತಂಗಡಗಿ

ವಿರೋಧ ಪಕ್ಷಗಳಿಗೆ ಚರ್ಚೆ ಮಾಡಲು ಯಾವುದೇ ವಿಚಾರಗಳಿಲ್ಲ. ರಾಜ್ಯದಲ್ಲಿ ಎರಡೂವರೆ ವರ್ಷ ಕಾಂಗ್ರೆಸ್ ಆಡಳಿತದಲ್ಲಿ ಜನ ಸಮೃದ್ಧಿಯಾಗಿದ್ದಾರೆ, ಕಾಂಗ್ರೆಸ್ ಪರವಾದ ಒಲವು ಹೊಂದಿದ್ದಾರೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಯಶಸ್ವಿಯಾಗಿ ಅದರಿಂದ ಮತ್ತಷ್ಟು ಸೌಲಭ್ಯಗಳು ಸಿಕ್ಕರೆ, ಜನ ಕಾಂಗ್ರೆಸ್‍ನತ್ತ ವಾಲುತ್ತಾರೆ ಎಂಬ ಆತಂಕದಿಂದ ಬಿಜೆಪಿಯವರು ದಿನ ಬೆಳಗಾದರೆ ಸಮೀಕ್ಷೆಯನ್ನು ಟೀಕಿಸಲಾರಂಭಿಸಿದ್ದಾರೆ ಎಂದು ತಿರುಗೇಟು ನೀಡಿದರು.

ಸಮೀಕ್ಷೆಯ ಮಾದರಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಯಥಾಸ್ಥಿತಿಯಲ್ಲಿ ನಡೆಯುತ್ತಿದೆ. 1561 ಜಾತಿಗಳನ್ನು ಕ್ರೋಢಿಕರಿಸಿದ್ದು, ಸ್ವಯಂ ಪ್ರೇರಿತ ಅಲ್ಲ. ಈ ಹಿಂದೆ ಕಾಂತರಾಜು ಆಯೋಗದ ಸಮೀಕ್ಷೆಯಲ್ಲೇ ಧರ್ಮ ಹಾಗೂ ಉಪ ಜಾತಿಗಳ ಮಾಹಿತಿ ಇತ್ತು ಎಂದು ಹೇಳಿದರು.

ಆರಂಭಿಕ ಹಂತದಲ್ಲಿ ಒಂದಿಷ್ಟು ಸಮಸ್ಯೆಗಳಿದ್ದವು. ಎಲ್ಲವನ್ನೂ ಸರಿಪಡಿಸಲಾಗುತ್ತಿದೆ. ಈಗ ಸಮೀಕ್ಷೆ ಸುಲಲಿತವಾಗಿ ನಡೆಯುತ್ತಿದೆ. ಅ.7ರ ವೇಳೆಗೆ ಮುಕ್ತಾಯಗೊಳ್ಳಲಿದೆ. ಒಂದು ವೇಳೆ ನಿಗದಿತ ವೇಳೆಗೆ ಸಮೀಕ್ಷೆ ಪೂರ್ಣಗೊಳ್ಳದಿದ್ದರೆ ಆ ಸಂದರ್ಭದಲ್ಲಿ ಕಾಲಾವಧಿಯ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಅವರ ಜೊತೆ ಚರ್ಚೆ ನಡೆಸಲಾಗುವುದು ಎಂದರು.

Tags:
error: Content is protected !!