ಬೆಂಗಳೂರು: ಸಿದ್ದರಾಮಯ್ಯ ಸಿಎಂ ಆಗಿರಲು ನಾಲಾಯಕ್ ಎಂದು ಜೆಡಿಎಸ್ ಕಿಡಿಕಾರಿದ್ದು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್ ಪಕ್ಷವು, ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡಾಫೆ ಉತ್ತರ ನೀಡಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡಾಫೆ ಉತ್ತರ ನೀಡಿರುವ ಸಿಎಂ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿರಲು ನಾಲಾಯಕ್ ಎಂದು ಲೇವಡಿ ಮಾಡಿದೆ.
ಸಿದ್ದರಾಮಯ್ಯ ಅವರೇ ಅಧಿಕಾರ ಅನುಭವಿಸುವಾಗ ನಿಮಗೆ ಮರೆವಿನ ಕಾಯಿಲೆಯೇ? ಕೆ.ಆರ್.ಮಾರ್ಕೆಟ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಇಡೀ ರಾಜ್ಯವೇ ತಲೆ ತಗ್ಗಿಸುವ ಹೀನ ಕೃತ್ಯವಾಗಿದೆ.
ಇದನ್ನು ಎಲ್ಲರೂ ಪ್ರಶ್ನಿಸಿದರೇ ಹಿಂದಿನ ಸರ್ಕಾರಗಳ ಕಾಲದಲ್ಲಿ ರೇಪ್ ಆಗಿಲ್ವಾ ಎಂದು ಸಮರ್ಥಿಸಿಕೊಳ್ಳುತ್ತೀದ್ದೀರಿ. ಆದ್ದರಿಂದ ನೀವು ರಾಜ್ಯದ ಮುಖ್ಯಮಂತ್ರಿಯಾಗಿರಲು ನಾಲಾಯಕ್ ಎಂದು ಕಿಡಿಕಾರಿದೆ.
ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ದರೋಡೆ, ಕೊಲೆ, ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂದು ವಾಗ್ದಾಳಿ ನಡೆಸಿದೆ.