ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಭೂಮಿ ಹಕ್ಕಿನ 6ನೇ ಗ್ಯಾರಂಟಿಯನ್ನು ಜಾರಿಗೊಳಿಸುತ್ತಿದ್ದು, ಬಿ ಖಾತಾಗಳನ್ನು ಎ ಖಾತೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ಬಿ ಖಾತೆಯಿಂದ ಎ ಖಾತೆಗೆ ಆಸ್ತಿ ಪರಿವರ್ತಿಸಲು ಸಿದ್ಧಪಡಿಸಿರುವ ವೆಬ್‍ಸೈಟ್‍ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ 25 ಲಕ್ಷ ಆಸ್ತಿಗಳಿವೆ. ಅದರಲ್ಲಿ 7.5 ಲಕ್ಷ ಎ ಖಾತೆಗಳಿದ್ದು, ಇನ್ನೂ 7.5 ಲಕ್ಷ ಬಿ ಖಾತೆಗಳಿವೆ. ಸುಮಾರು 8 ರಿಂದ 9 ಲಕ್ಷ ಅಸ್ತಿಗಳನ್ನೂ ಖಾತೆ ನೋಂದಣಿಗಾಗಿ ಮನವಿ ಸಲ್ಲಿಕೆಯಾಗಿವೆ ಎಂದು ವಿವರಿಸಿದರು.
ನಮ್ಮ ರಾಜ್ಯದಲ್ಲಿನ ಆಸ್ತಿ ದಾಖಲಾತಿಗಳ ಕ್ರಮ ಬದ್ಧತೆ ಮತ್ತು ಡಿಜಿಟಲೀಕರಣಕ್ಕಾಗಿ ಕೇಂದ್ರ ಸರ್ಕಾರ ನಮಗೆ ಪ್ರಶಸ್ತಿ ನೀಡಿದೆ ಎಂದು ಹೇಳಿಕೊಂಡರು.
ಇದನ್ನು ಓದಿ: ಇಡೀ ರಾಜ್ಯಕ್ಕೆ ಒಳಿತಾಗುವಂತೆ ಹಾಸನಾಂಬೆ ದೇವಿ ಬಳಿ ಪ್ರಾರ್ಥನೆ ಸಲ್ಲಿಸಿದ್ದೇನೆ: ಸಿಎಂ ಸಿದ್ದರಾಮಯ್ಯ
ಕರ್ನಾಟಕ ಪಟ್ಟಣ ಮತ್ತು ನಗರ ಯೋಜನಾ ಕಾಯ್ದೆ 1961ರ ಅಡಿಯಲ್ಲಿ ಅನುಮೋದನೆಗೊಂಡ ಕೃಷಿ ಜಮೀನುಗಳ ಕಂದಾಯ ನಿವೇಶನಗಳಲ್ಲಿ ಮನೆ ಕಟ್ಟಿಕೊಂಡಿದ್ದರೆ, ಕೆಲವು ಪರಿವರ್ತನೆಯಾಗಿದ್ದು, ಇನ್ನೂ ಕೆಲವು ಪರಿವರ್ತನೆಯಾಗದೇ ಇದ್ದರೆ, ಈ ಆಸ್ತಿಗಳ ಮಾಲೀಕರಿಗೆ ಬ್ಯಾಂಕಿನಿಂದ ಸಾಲ ಪಡೆಯಲು ಮತ್ತು ಕಟ್ಟಡ ನಿರ್ಮಾಣಕ್ಕೆ ನಿಯಮ ಬದ್ಧವಾಗಿ ನಕ್ಷೆ ಅನುಮೋದನೆ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಎ ಪರಿವರ್ತನಾ ಅಭಿಯಾನವನ್ನು ಆರಂಭಿಸಿದ್ದೇವೆ. ನಿರ್ಮಾಣಗೊಂಡಿರುವ ಕಟ್ಟಡದ ಸಕ್ರಮೀಕರಣಕ್ಕೆ ನಾವು ಕೈ ಹಾಕುತ್ತಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಕಂದಾಯ ಲೇಔಟ್‍ಗಳಲ್ಲಿ ಭೂ ಮಾಲೀಕರು ರಸ್ತೆಗಳನ್ನು ತಮ ಹೆಸರಿಗೆ ಇರಿಸಿಕೊಂಡು, ಇಬ್ಬಿಬ್ಬರಿಗೆ ನೋಂದಣಿ ಮಾಡಿ, ಸಾರ್ವಜನಿಕರಿಗೆ ಮೋಸ ಮಾಡುವ ಪ್ರಯತ್ನ ಮಾಡುತ್ತಿದ್ದರು. ಹೀಗಾಗಿ ಮೂರ್ನಾಲ್ಕು ತಿಂಗಳ ಹಿಂದೆ ನಡೆದ ಅಧಿವೇಶನದಲ್ಲಿ ಕಾನೂನು ತಿದ್ದುಪಡಿ ತಂದು ಎಲ್ಲಾ ರಸ್ತೆಗಳನ್ನು ಸರ್ಕಾರದ ಆಸ್ತಿಗಳೆಂದು ಘೋಷಣೆ ಮಾಡಿದ್ದೇವೆ ಎಂದರು.
ಕಂದಾಯ ನಿವೇಶನಗಳು, ಪರಿವರ್ತನೆಯಾಗದ ಭೂಮಿ, ಯೋಜನೆ ಅನುಮೋದನೆಯಿಲ್ಲದ ಬಿ ಖಾತೆ ನಿವೇಶನಗಳನ್ನು ಎ ಖಾತೆಯನ್ನಾಗಿ ಪರಿವರ್ತಿಸಿಕೊಳ್ಳಲು 100 ದಿನಗಳ ಕಾಲಾವಕಾಶ ನೀಡಲಾಗುತ್ತಿದೆ.
ನವೆಂಬರ್.1ರಿಂದ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುತ್ತಿದ್ದು, ಸಾರ್ವಜನಿಕರು 500 ರೂ. ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದು ಎಂದರು.





