Mysore
23
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಕನ್ನಡ ಬಾವುಟಕ್ಕೆ ಮಾನ್ಯತೆ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆಯಲು ಮುಂದಾದ ರಾಜ್ಯ ಸರ್ಕಾರ

karnataka flag

ಬೆಂಗಳೂರು : ಈ ಹಿಂದೆ ಭಾರೀ ವಿವಾದ ಸೃಷ್ಟಿಸಿದ್ದ ಕರ್ನಾಟಕದ ಹಳದಿ-ಕೆಂಪು ಬಾವುಟಕ್ಕೆ ಅಧಿಕೃತ ಮಾನ್ಯತೆ ಕೊಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆಯಲು ಮುಂದಾಗಿರುವುದು ಹೊಸ ವಿವಾದಕ್ಕೆ ನಾಂದಿ ಹಾಡುವ ಸಾಧ್ಯತೆಯಿದೆ.

ಸಾಮಾನ್ಯವಾಗಿ ಯಾವುದೇ ರಾಜ್ಯವು ಪ್ರತ್ಯೇಕವಾದ ಧ್ವಜ ಹೊಂದಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಈ ಹಿಂದೆಯೇ ಕೇಂದ್ರ ಗೃಹ ಇಲಾಖೆ ಸ್ಪಷ್ಟಪಡಿಸಿತ್ತು. ಆದರೂ ಕರ್ನಾಟಕ ಮತ್ತು ಕನ್ನಡಿಗರ ಆಸ್ಮಿತೆಯಾಗಿರುವ ಹಳದಿ- ಕೆಂಪು ಬಣ್ಣ ಹೊಂದಿರುವ ನಾಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡುವಂತೆ ಮತ್ತೊಮೆ ಮನವಿ ಮಾಡಲು ತೀರ್ಮಾನಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು, ಶೀಘ್ರದಲ್ಲೇ ಕನ್ನಡದ ಸಾಹಿತಿಗಳು, ಬರಹಗಾರರು, ಚಿಂತಕರ ನೇತೃತ್ವದ ನಿಯೋಗ ದೆಹಲಿಗೆ ತೆರಳಲಿದ್ದು, ಕೇಂದ್ರದ ಸಚಿವರ ಭೇಟಿ ಮಾಡಲಿದ್ದಾರೆ. ಆ ಮೂಲಕ ಕನ್ನಡ ಬಾವುಟಕ್ಕೆ ಅಧಿಕೃತತೆ ಹಾಗೂ ಶಾಸ್ತ್ರೀಯ ಭಾಷೆ ಅನುದಾನ ಕೋರಿ ಮನವಿ ಮಾಡಲಿದ್ದೇವೆ. ಈ ಸಂಬಂಧ ಪತ್ರವನ್ನೂ ಬರೆಯಲಿದ್ದೇವೆ ಎಂದು ತಿಳಿಸಿದ್ದಾರೆ.

ನಾಡ ಧ್ವಜವನ್ನು ಗಣರಾಜ್ಯೋತ್ಸವ ಅಥವಾ ಸ್ವಾತಂತ್ರ್ಯ ದಿನಾಚರಣೆ ವೇಳೆ ಬಳಸಲಾಗುವುದಿಲ್ಲ, ರಾಜ್ಯದ ಸಂಸ್ಥಾಪನಾ ದಿನ(ಏಕಿಕೃತ) ದಲ್ಲಿ ಮಾತ್ರ ನಾಡಧ್ವಜವನ್ನು ಹಾರಿಸಬಹುದಾಗಿದೆ. ಒಂದು ವೇಳೆ ಪ್ರತ್ಯೇಕ ನಾಡ ಧ್ವಜ ಹೊಂದುವ ಅವಕಾಶ ಸಿಕ್ಕರೆ ದೇಶದಲ್ಲಿ ಪ್ರತ್ಯೇಕ ಧ್ವಜ ಹೊಂದಿದ ಎರಡನೇ ರಾಜ್ಯ ಕರ್ನಾಟಕವಾಗುತ್ತದೆ.

ಈ ಮೊದಲು ಕಣಿವೆ ರಾಜ್ಯವಾದ ಜಮ್ಮು ಕಾಶ್ಮೀರದಲ್ಲಿ ಮಾತ್ರ ಸಂವಿಧಾನದ 370ನೇ ಅಡಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿದ ಕಾರಣ, ಪ್ರತ್ಯೇಕ ಧ್ವಜ ಹೊಂದಿರುವ ಮೊದಲ ರಾಜ್ಯವಾಗಿತ್ತು. ಆದರೆ ಈಗ ಇದನ್ನು ರದ್ದುಪಡಿಸಿರುವ ಕಾರಣ ಜಮ್ಮು ಮತ್ತು ಕಾಶ್ಮೀರದಲ್ಲೂ ದೇಶದ ಇತರೆ ಕಡೆ ಇರುವಂತೆ ತ್ರಿವರ್ಣ ಧ್ವಜ ಹಾರಿಸಲಾಗುತ್ತದೆ.

2017 ರಲ್ಲೇ ಬಾವುಟಕ್ಕೆ ಅಧಿಕೃತತೆ ಕೋರಿ ಕೇಂದ್ರಕ್ಕೆ ಅಂದಿನ ಸಿದ್ದರಾಮಯ್ಯ ಸರ್ಕಾರ ಮನವಿ ಸಲ್ಲಿಸಿತ್ತು. ಇದೀಗ ಮತ್ತೊಮ್ಮೆ  ಪತ್ರ ಬರೆಯುವ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಲು ಮುಂದಾಗಿದೆ. ಕನ್ನಡಿಗರ ಅಸ್ಮಿತೆಯ ಸಂಕೇತವಾದ ನಾಡ ಬಾವುಟಕ್ಕೆ ಹೊಸ ವಿನ್ಯಾಸ ನೀಡಿ, ಕಾನೂನಿನ ಮಾನ್ಯತೆಗಾಗಿ ಕೇಂದ್ರಕ್ಕೆ ಸಲ್ಲಿಸಲಾಗಿದೆ. ಆದರೆ, ಕೇಂದ್ರ ಸರ್ಕಾರದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕರ್ನಾಟಕದ ಹೊಸ ಧ್ವಜಕ್ಕೆ ಮಾನ್ಯತೆ ಸಿಕ್ಕರೆ ಅದೊಂದು ಇತಿಹಾಸವಾಗಲಿದೆ.

ಕರ್ನಾಟಕದಲ್ಲಿ ಈಗ ಇರುವ ಹಳದಿ, ಕೆಂಪು ಬಣ್ಣದ ಬಾವುಟಕ್ಕೆ ಸಾಂವಿಧಾನಿಕ ಮಾನ್ಯತೆ ಸಿಕ್ಕಿಲ್ಲ. ಹೀಗಾಗಿ ಪ್ರತ್ಯೇಕ ನಾಡಧ್ವಜ ರಚನೆಗೆ ಹಿಂದಿನ ಸರ್ಕಾರ ಧ್ವಜ ಸಮಿತಿ ನೇಮಕ ಮಾಡಿತ್ತು. ಆ ಸಮಿತಿ ಕೂಲಂಕಷವಾಗಿ ಪರಿಶೀಲಿಸಿ, ಎಲ್ಲ ಬಗೆಯ ಮಾಹಿತಿ ಪಡೆದು ಹೊಸ ಧ್ವಜವನ್ನು ಸರ್ಕಾರಕ್ಕೆ ಒಪ್ಪಿಸಿದೆ. ರಾಜ್ಯ ಸರ್ಕಾರ ಅದನ್ನು ಕೇಂದ್ರಕ್ಕೆ ಸಲ್ಲಿಸಿದ್ದು, ಕೇಂದ್ರದಿಂದ ಈ ವರೆಗೂ ಯಾವುದೇ ಉತ್ತರ ಬಂದಿಲ್ಲ.

ಬಾವುಟದ ಇತಿಹಾಸ: ಕನ್ನಡಿಗರ ಹೋರಾಟದಲ್ಲಿ ಕಂಗೊಳಿಸುವ ಹಳದಿ, ಕೆಂಪು ಬಣ್ಣದ ಧ್ವಜವನ್ನು ಕನ್ನಡದ ವೀರ ಸೇನಾನಿ ಮ.ರಾಮಮೂರ್ತಿಯವರು ರಚಿಸಿದ ಕನ್ನಡ ಪಕ್ಷದ ಅಧಿಕೃತ ಬಾವುಟ. ಅದನ್ನೇ ಕನ್ನಡಿಗರು 1965ರಿಂದಲೂ ಗೋಕಾಕ್ ಚಳವಳಿ ಸೇರಿದಂತೆ ಕನ್ನಡ ಪರ ಉತ್ಸವ, ಕಾರ್ಯಕ್ರಮದಲ್ಲಿ ಬಳಸಿಕೊಂಡು ಬರುತ್ತಿದ್ದಾರೆ. ಈ ಧ್ವಜದ ರಚನೆಗೂ ಪೂರ್ವದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಈಗಿನ ಅಧ್ಯಕ್ಷ ವಾಟಾಳ್ ನಾಗರಾಜ್ ಹಾಗೂ ಮ.ರಾಮಸ್ವಾಮಿ ಸೇರಿಕೊಂಡು ಭಗವಾಧ್ವಜದ ಆಕಾರ ಹೋಲುವ ಹಳದಿ ಬಣ್ಣದ ಧ್ವಜ ರಚಿಸಿದ್ದರು.

ಧ್ವಜದ ಮಧ್ಯದಲ್ಲಿ ಕರ್ನಾಟಕದ ಲಾಂಛನ ಹಾಗೂ ಏಳು ಪೈರುಗಳಿದ್ದವು. ಹಲವು ಕಾರಣದಿಂದಾಗಿ ಈ ಧ್ವಜ ಹೆಚ್ಚುಕಾಲ ಜನಮಾನಸದಲ್ಲಿ ಉಳಿಯಲಿಲ್ಲ. ಕನ್ನಡ ಧ್ವಜವನ್ನು ರಾಜ್ಯ ಧ್ವಜವನ್ನಾಗಿ ಘೋಷಿಸಬೇಕೆಂದು 1998ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರ್ಕಾರವನ್ನು ಆಗ್ರಹಿಸಿತ್ತು. ಕಾನೂನಿನ ತೊಡಕಿನಿಂದ ಅದು ಸಾಧ್ಯವಾಗಿರಲಿಲ್ಲ. ನಂತರ ಡಿ.ವಿ.ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ರಾಜ್ಯೋತ್ಸವದಂದು ಸರ್ಕಾರಿ ಕಟ್ಟಡಗಳ ಮೇಲೆ ಕಡ್ಡಾಯವಾಗಿ ಕನ್ನಡ ಧ್ವಜ ಹಾರಿಸಲು ಸುತ್ತೋಲೆ ಹೊರಡಿಸಿದ್ದರು. ಹೈಕೋರ್ಟ್ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ.

ಧ್ವಜ ವಿನ್ಯಾಸ ಸಮಿತಿ : ಈಗಿರುವ ಧ್ವಜಕ್ಕೆ ನಾಡಧ್ವಜ ಎನ್ನುವ ಕಾನೂನಿನ ಮಾನ್ಯತೆ ಸಿಕ್ಕಿಲ್ಲ. ಇದನ್ನು ಪಕ್ಷದ ಅಧಿಕೃತ ಧ್ವಜ ಎಂದು ಚುನಾವಣಾ ಆಯೋಗವೇ ಮಾನ್ಯ ಮಾಡಿದೆ. ಹೀಗಾಗಿ ಇದೇ ಧ್ವಜವನ್ನು ನಾಡಧ್ವಜವಾಗಿಸಲು ಕಾನೂನು ತೊಡಕು ಎದುರಾಗಲಿದೆ. ಹೀಗಾಗಿ ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ, ಕಾನೂನು ಇಲಾಖೆ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯವರನ್ನು ಸದಸ್ಯರನ್ನಾಗಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಿತ್ತು.

ಕನ್ನಡ ಧ್ವಜ ವಿನ್ಯಾಸಕ್ಕೆ ರಾಜ್ಯ ಸರ್ಕಾರ ನೇಮಿಸಿದ್ದ 9 ಮಂದಿ ತಜ್ಞರ ಸಮಿತಿ ಈಗಾಗಲೇ ಧ್ವಜ ಸ್ವರೂಪವನ್ನು ಸ್ಪಷ್ಟಪಡಿಸಿ ಸರ್ಕಾರಕ್ಕೆ ವರದಿ ಒಪ್ಪಿಸಿದೆ. ಹಳದಿ ಮತ್ತು ಕೆಂಪು ಬಣ್ಣದ ಮಧ್ಯೆ ಶಾಂತಿ, ಸೌಹಾರ್ದತೆ ಹಾಗೂ ಭ್ರಾತೃತ್ವದ ಸಂಕೇತವಾಗಿ ಬಿಳಿ ಬಣ್ಣವನ್ನು ಸೇರಿಸಿದೆ. ನಾಡಧ್ವಜವಾಗಿರುವುದರಿಂದ ಬಿಳಿ ಬಣ್ಣದ ಮಧ್ಯದಲ್ಲಿ ಗಂಡಭೇರುಂಡ ಲಾಂಛನ ಇರುವ ಧ್ವಜ ವಿನ್ಯಾಸ ಮಾಡಿದ್ದಾರೆ. ಸಾಹಿತಿ ಡಾ.ಪಾಟೀಲ ಪುಟ್ಟಪ್ಪ ಸೇರಿ ಕನ್ನಡಪರ ಹೋರಾಟಗಾರರು ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ರಚಿಸಿ, ಕಾನೂನಿನ ಮಾನ್ಯತೆ ಪಡೆಯುವಂತೆ ಸರ್ಕಾರವವನ್ನು ಕೋರಿದ್ದರು. ಈ ಕುರಿತು ಅನೇಕ ಚರ್ಚೆಗಳು ನಡೆದಿದ್ದವು.

ಹಳದಿ-ಕೆಂಪು ಪ್ರತಿಪಾದಿಸುವುದೇನು? : ಈಗಿರುವ ಕನ್ನಡ ಬಾವುಟದ ಹಳದಿ ಬಣ್ಣ ಕನ್ನಡಿಗರ ಸ್ವಾಭಿಮಾನ, ಶಾಂತಿ, ರಕ್ಷಣೆಯ ಪ್ರತೀಕ. ಜತೆಗೆ ಕನ್ನಡ ನಾಡು ಚಿನ್ನದ ಬೀಡು ಎಂಬುದನ್ನು ಪ್ರತಿಪಾದಿಸುತ್ತದೆ. ಕೆಂಪು ಬಣ್ಣ, ಕನ್ನಡಿಗರ ಕ್ಷಾತ್ರತೇಜ, ತ್ಯಾಗ ಮತ್ತು ಕ್ರಾಂತಿಯ ಪ್ರತೀಕ ಎಂದು ಮ.ರಾಮಮೂರ್ತಿಯವರೇ ಧ್ವಜ ರಚನೆಯಾದ ನಂತರ ನಡೆದ ಸಮಾವೇಶದಲ್ಲಿ ಹೇಳಿದ್ದರು.

ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದುವ ಯಾವುದೇ ಅವಕಾಶ ಸಂವಿಧಾನದಲ್ಲಿಲ್ಲ, ತ್ರಿವರ್ಣ ಧ್ವಜವೇ ಭಾರತದ ರಾಷ್ಟ್ರಧ್ವಜ, ಒಂದೇ ರಾಷ್ಟ್ರ, ಒಂದೇ ಧ್ವಜ ಎಂಬ ನೀತಿಗೆ ಎಲ್ಲಾ ರಾಜ್ಯಗಳು ಬದ್ಧವಾಗಿರಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿತ್ತು.

ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ, ಪ್ರತ್ಯೇಕ ಧ್ವಜ ಇದ್ದರೆ ತಪ್ಪೇನು ಎಂದು ಪ್ರಶ್ನಿಸಿರುವ ಸಿಎಂ ಸಿದ್ದರಾಮಯ್ಯ ಪ್ರತ್ಯೇಕ ನಾಡಧ್ವಜದ ವಿಷಯವನ್ನು ಸಮರ್ಥಿಸಿಕೊಂಡಿದ್ದರು. ರಾಜ್ಯದಲ್ಲಿ ಈಗಾಗಲೇ ನಾಡಗೀತೆ ಅಧಿಕೃತವಾಗಿ ಇದೆ. ಅದೇ ರೀತಿ ನಾಡ ಧ್ವಜ ಇದ್ದರೆ ತಪ್ಪೇನೂ ಇಲ್ಲ. ಧ್ವಜ ರೂಪಿಸುವ ಸಂಬಂಧ ಸಮಿತಿ ರಚಿಸಲಾಗಿದೆ. ವರದಿ ಬಂದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.

Tags:
error: Content is protected !!