ಹುಬ್ಬಳ್ಳಿ: ಕೇಂದ್ರ ಸರ್ಕಾರ ಪ್ರತಿ ಕಿಲೋಗೆ ಕನಿಷ್ಠ 22.50 ರೂ.ಗೆ ಅಕ್ಕಿ ನೀಡುತ್ತೇವೆ ಎಂದರು ರಾಜ್ಯ ಸರ್ಕಾರ ನಮ್ಮಿಂದ ಅಕ್ಕಿ ಖರೀದಿಸುತ್ತಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪ್ರತಿ ಕಿಲೋಗೆ 22.50 ರೂಗೆ ಅಕ್ಕಿ ನೀಡುವ ಮೂಲಕ 10 ರೂ. ರಿಯಾಯಿತಿ ನೀಡುತ್ತಿದೆ. ಆದರೆ, ಕಾಂಗ್ರೆಸ್ ನೇತೃತ್ವದ ಸರ್ಕಾರ ಸ್ವೀಕರಿಸಲು ಸಿದ್ದವಿಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರ ಪ್ರಸ್ತುತ ಪ್ರತಿ ಕಿಲೋಗೆ 34ರೂ. ನೀಡಿ ಅಕ್ಕಿ ಖರೀದಿಸುತ್ತಿದೆ. ಕೇಂದ್ರ ಸರ್ಕಾರ ನೀಡುವ ದರದಲ್ಲಿ ಅಕ್ಕಿ ಖರೀದಿಸಿದರೆ, ವಾರ್ಷಿಕವಾಗಿ 2,280 ಕೋಟಿ ರೂ. ಉಳಿಸಬಹುದು. ಆದರೆ, ಉದ್ದೇಶಪೂರ್ವಕವಾಗಿಯೇ ಈ ಅವಕಾಶವನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.
ಗ್ಯಾರಂಟಿ ಯೋಜನೆಗಳಿಗೆ ನೀಡುತ್ತಿದ್ದ ಹಣ ಫಲಾನುಭವಿಗಳ ಖಾತೆಗೆ ಇನ್ನು ಜಮಾವಣೆ ಆಗಿಲ್ಲ. ರಾಜ್ಯ ಸರ್ಕಾರ ದಿವಾಳಿ ಹಂತಕ್ಕೆ ತಲುಪಿದೆ. ಸಚಿವ ಮುನಿಯಪ್ಪ ಭೇಟಿ ಮಾಡಿ ಹೋದರೂ ಅಕ್ಕಿ ಆರ್ಡರ್ ಮಾಡಿಲ್ಲ. ಏಕೆಂದರೆ ಖರೀದಿಸಲು ಅವರ ಬಳಿ ದುಡ್ಡಿಲ್ಲ ಎಂದು ವ್ಯಂಗ್ಯವಾಡಿದರು.